ಚಿತ್ರದುರ್ಗ: ಮಲಪ್ರಭಾ ನದಿ ದಂಡೆ ಒತ್ತುವರಿ ಸಂಬಂಧ ಒಟ್ಟು 1800 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾಧ್ಯಮಗಳ ವರದಿ ಆಧರಿಸಿ ನ್ಯಾಯಾಲಯ ಸ್ವ-ಇಚ್ಛೆಯಿಂದ ಪ್ರಕರಣ ಕೈಗೆತ್ತಿಕೊಂಡಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ, ನ್ಯಾಯಮೂರ್ತಿ ಬಿ.ಎ.ಪಾಟೀಲ್ ಹೇಳಿದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ ಕುರಿತು ಶನಿವಾರ ಜಿಪಂ ಸಭಾಂಗಣದಲ್ಲಿ ನಡೆದ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಚಿಕ್ಕಮಗಳೂರು ಜಿಲ್ಲೆಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಒತ್ತುವರಿಯಾಗಿರುವ ಕುರಿತು ಮಾಧ್ಯಮ ವರದಿ ಆಧರಿಸಿ 17 ಪ್ರಕರಣ ದಾಖಲಿಸಲಾಗಿದೆ. ಪತ್ರಿಕೆಗಳು ಕಣ್ತೆರೆಸುವ ಕೆಲಸ ಮಾಡುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜೂನ್ ತಿಂಗಳೊಂದರಲ್ಲೇ ವಿಶೇಷ ನ್ಯಾಯಾಲಯದ ಮುಂದಿದ್ದ ಹಲವು ಪ್ರಕರಣ ಇತ್ಯರ್ಥಪಡಿಸಿ, ಭೂ ಕಬಳಿಕೆ ಸಂಬಂಧ ರಾಜ್ಯದಲ್ಲಿ 224.4 ಎಕರೆ ಒತ್ತುವರಿ ಜಮೀನನ್ನು ಮರಳಿ ಸರ್ಕಾರದ ಸುಪರ್ದಿಗೆ ವಹಿಸಿ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.