ನ್ಯೂಸ್

ಮರು ಜಾತಿಗಣತಿಗೆ ವಾಟಾಳ್ ಖಂಡನೆ

ಮರು ಜಾತಿಗಣತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದ ಹಾರ್ಡಿಂಜ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಸಿಎಂ ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಇದ್ದಂತೆ ಇಲ್ಲ. ಎರಡನೇ ಅವಧಿಯಲ್ಲಿ ಬಲಹೀನರಾಗಿದ್ದಾರೆ. ಮರು ಜಾತಿಗಣತಿ ವಿಚಾರದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ನೂರಾರು ನಾಗರಹಾವುಗಳ ಮಧ್ಯೆ ಸಿದ್ದರಾಮಯ್ಯ ಇದ್ದಾರೆ. ಮರು ಜಾತಿ ಗಣತಿ ಬದಲು ಕನ್ನಡ ಭಾಷಿಕರ ಗಣತಿ ಮಾಡಬೇಕು. ಮೈಸೂರಿನಲ್ಲೂ ಅನ್ಯ ಭಾಷಿಕರ ಪ್ರಾಬಲ್ಯ ಹೆಚ್ಚಾಗುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ ಎಂದು ಗಣತಿ ಮಾಡಬೇಕು. ಕನ್ನಡ ಭಾಷಿಕರು ಎಷ್ಟಿದ್ದಾರೆ, ಪರ ಭಾಷಿಕರು ಎಷ್ಟಿದ್ದಾರೆ ಎಂಬ ಗಣತಿ ಮಾಡಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕೆಆರ್‌ಎಸ್‌ನಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ಕಾವೇರಿ ಆರತಿಗೆ ವಿರೋಧ ವ್ಯಕ್ತಪಡಿಸಿದ ಅವರು, ಕೆಆರ್‌ಎಸ್ ಜಲಾಶಯಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು ವಿಶೇಷ ಮಹತ್ವವಿದೆ. ಅಲ್ಲಿ ನೂರಾರು ಕೋಟಿ ರೂ. ವೆಚ್ಚದಲ್ಲಿ ಪಾರ್ಕ್ ನಿರ್ಮಾಣದ ಅಗತ್ಯವಿಲ್ಲ. ಅದೇ ರೀತಿ ಕಾವೇರಿ ಆರತಿಯ ಅವಶ್ಯಕತೆಯೂ ಇಲ್ಲ ಎಂದರು.

ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿ 2 ಸಾವಿರ ರೂ. ನೀಡುವವರಿಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡುವ ಕುರಿತು ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಭಕ್ತಿಯ ಹೆಸರಿನಲ್ಲಿ ಭಕ್ತರ ದರೋಡೆ ಮಾಡಲು ಹೊರಟಿದೆ. ದೇಶ ವಿದೇಶಗಳ ಭಕ್ತರು ಚಾಮುಂಡಿ ಬೆಟ್ಟಕ್ಕೆ ಬರುತ್ತಾರೆ. 2 ಸಾವಿರ ರೂಪಾಯಿ ಪಡೆದು ವಿಶೇಷ ದರ್ಶನದ ವ್ಯವಸ್ಥೆಗೆ ಮುಂದಾಗಿರುವುದು ಸರಿಯಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ವ್ಯಾಪಾರೀಕರಣ ಮಾಡಬಾರದು. ಭಕ್ತಿಯ ಹೆಸರಿನಲ್ಲಿ ಭಕ್ತರ ದರೋಡೆ ಮಾಡುವ ನಿರ್ಧಾರ ಕೈಬಿಡಬೇಕು ಎಂದು ಒತ್ತಾಯಿಸಿದರು.

ಆಂಧ್ರದಲ್ಲಿ ರಾಜ್ಯದ ತೋತಾಪುರಿ ಮಾವಿನಕಾಯಿ ನಿಷೇಧ ನಿಜಕ್ಕೂ ಖಂಡನೀಯ. ಕೂಡಲೇ ನಿಷೇಧ ವಾಪಸ್ ಪಡೆಯದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹೋರಾಟಗಾರರಾದ ಶಿವಶಂಕರ್, ಮೂಗೂರು ನಂಜುಂಡಸ್ವಾಮಿ, ತೇಜಸ್ ಲೋಕೇಶ್‌ಗೌಡ, ಪಾರ್ಥಸಾರಥಿ, ರಾಧಾಕೃಷ್ಣ ಇತರರಿದ್ದರು.