ಶಿವಮೊಗ್ಗ: ಅಕ್ರಮ ಗಣಿಗಾರಿಕೆ, ಸಾಗಣೆ, ದಾಸ್ತಾನಿಗೆ ಸಂಬಂಧಿಸಿ ಜಿಲ್ಲಾದ್ಯಂತ ಏಕರೀತಿಯ ನಿಯಮಗಳನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಜಿಲ್ಲಾ ಮರಳು ಟಾಸ್ಕ್‌ಫೋರ್ಸ್ ಸಭೆಯಲ್ಲಿ ಮಾತನಾಡಿದ ಅವರು, ಈ ನಿಯಮವನ್ನು ಜಾರಿಗೊಳಿಸಲು ಆಯಾ ತಾಲೂಕುಗಳ ತಹಸೀಲ್ದಾರರು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ, ವರದಿ ಪಡೆದು, ಸಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಹಾಗೂ ಸ್ಥಳೀಯ ವಿರೋಧಗಳ ನಡುವೆಯೂ ಕ್ವಾರಿಗಳನ್ನು ನಡೆಸುತ್ತಿರುವ, ನಿಯಮ ಮೀರಿ ಕ್ವಾರಿಗಳನ್ನು ನಿರ್ವಹಿಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಪೂರ್ವದಲ್ಲಿ ಭೂ ವಿಜ್ಞಾನಿಗಳು ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಇದುವರೆಗೆ ವಿವಿಧ ಇಲಾಖೆಗಳಿಗೆ ಕಾಯ್ದಿರಿಸಿದ ಕ್ವಾರಿಗಳಿಂದ ಮರಳನ್ನು ಪಡೆದ ಇಲಾಖೆಗಳ ಅಧಿಕಾರಿಗಳು ಎಂ-ಸ್ಯಾಂಡ್ ಬಳಸಿರುವ ಹಾಗೂ ಬಳಸದಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಕೋರಿಕೆಯ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಖಾಸಗಿ ಸಂಸ್ಥೆಗಳ ಗುತ್ತಿಗೆದಾರರು ಪಡೆದಿರುವ ಕ್ವಾರಿಗಳಲ್ಲಿ ಬಳಸಿರುವ ಮರಳಿನ ಪ್ರಮಾಣ ಹಾಗೂ ಸಲ್ಲಿಸಿರುವ ರಾಯಧನದ ಕುರಿತು ಮಾಹಿತಿ ಪಡೆಯಬೇಕು. ಜಿಲ್ಲಾ ಟಾಸ್ಕ್‌ಫೋರ್ಸ್ ಅನುಮತಿಯಿಲ್ಲದೇ ನೆರೆಯ ಜಿಲ್ಲೆಗಳಿಗೆ ಸಾಗಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಸ್ಥಳೀಯರಿಗೆ ಅನನುಕೂಲವಾಗದಂತೆ ಅಥವಾ ಕೃತಕ ಅಭಾವ ಸೃಷ್ಟಿಸದಂತೆ ವಿಶೇಷ ಗಮನಹರಿಸಬೇಕು ಎಂದು ತಿಳಿಸಿದರು.
ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದೃಷ್ಟಿ ಜೈಸ್ವಾಲ್, ಹಿರಿಯ ಭೂವಿಜ್ಞಾನಿ ಪಿ.ಕೆ.ನಾಯ್ಕ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.