ನ್ಯೂಸ್

ಮನೆ ಬಾಗಿಲಿಗೆ ಆಹಾರ, ದಿನಬಳಕೆ ವಸ್ತು ತಲುಪಿಸಲು ವ್ಯವಸ್ಥೆ: ಶಾಸಕ ಸಿ.ಎನ್.ಬಾಲಕೃಷ್ಣ

ಚನ್ನರಾಯಪಟ್ಟಣ: ಆಹಾರ ಹಾಗೂ ದಿನಬಳಕೆ ಪದಾರ್ಥಗಳಿಗೆ ಕೊರತೆಯಾದಲ್ಲಿ ನಮ್ಮ ಗಮನಕ್ಕೆ ತಂದರೆ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ಪಟ್ಟಣದ ಹೌಸಿಂಗ್ ಬೋರ್ಡ್ ನಿವಾಸಿಗಳಿಗೆ ಶನಿವಾರ ಆಹಾರ ಪದಾರ್ಥಗಳ ಕಿಟ್ ವಿತರಿಸಿ
ಮಾತನಾಡಿದರು.

ಇದು ನಾಲ್ಕಾರು ಜನರಿಗೆ ಸಹಾಯ ಮಾಡುವ ಸಮಯವಾಗಿದ್ದು ಯಾರೂ ಭಯಪಡುವ
ಅಗತ್ಯವಿಲ್ಲ. ಎಲ್ಲರೂ ಒಂದಾಗಿ ಕರೊನಾ ಎಂಬ ಮಹಾಮಾರಿ ತಂದಿಟ್ಟಿರುವ ಸಂಕಷ್ಟಗಳನ್ನು
ಎದರಿಸೋಣ ಎಂದು ಧೈರ್ಯ ತುಂಬಿದರು.

ಲಾಕ್‌ಡೌನ್ ಪ್ರಾರಂಭದ ದಿನದಿಂದಲೂ ನಿರ್ಗತಿಕರಿಗೆ ಕುಡಿಯುವ ನೀರು ಹಾಗೂ ಅಹಾರದ
ಪೊಟ್ಟಣ ನೀಡುವ ಕಾರ್ಯದಲ್ಲಿ ತೊಡಗಿದ್ದೇವೆ. ಅಲ್ಲದೆ ಸಂಕಷ್ಟದಲ್ಲಿರುವವರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಗುತ್ತಿದೆ. ಸದ್ಯ ತಾಲೂಕು ವ್ಯಾಪ್ತಿಯ ಎಲ್ಲ ಭಾಗದ ಜನತೆಗೆ ಸ್ಪಂದಿಸಿದ್ದೇವೆ ಎಂದರು.

ಲಾಕ್‌ಡೌನ್ ಹಿನ್ನೆಲೆ ತಾಲೂಕು ವ್ಯಾಪ್ತಿಯಲ್ಲಿ ಬೆಳೆದಿರುವ ಸಿಹಿ ಕುಂಬಳ, ಎಲೆಕೋಸು ಸೇರಿದಂತೆ ವಿವಿಧ ಬೆಳೆಗಳು ಮಾರಾಟವಾಗದೆ ಹಾಳಾಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದರು. ವಿಷಯ ತಿಳಿದು ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ
ಮಾಡಿದ್ದು ಸೂಕ್ತ ಪರಿಹಾರ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು
ತಿಳಿಸಿದರು.

ತಾಲೂಕಿನ ಸಹಕಾರ ಸಂಘಗಳು ಹಾಗೂ ನ್ಯಾಯಾಬೆಲೆ ಅಂಗಡಿಗಳ ಮೂಲಕ ಮನೆಗೊಂದು ಮಾಸ್ಕ್ ಹಾಗೂ ಸ್ಯಾನಿಟೈಸರ್ ತಲುಪಿಸುವ ಉದ್ದೇಶವಿದ್ದು ಹಂತ ಹಂತವಾಗಿ ಒಂದೂವರೆ ಲಕ್ಷ
ಮಾಸ್ಕ್ ಗಳನ್ನು ವಿತರಿಸಲಾಗುವುದು, ಅಲ್ಲದೇ ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಇತರ
ಸಾಮಗ್ರಿಗಳನ್ನು ಸಹಕಾರ ಸಂಘಗಳ ಮೂಲಕ ಕಡಿಮೆ ದರದಲ್ಲಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಹೌಸಿಂಗ್ ಬೋರ್ಡ್ ನ ನೂರಾರು ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ಜತೆಗೆ ಮಾಸ್ಕ್ ಹಾಗೂ
ಸ್ಯಾನಿಟೈಸರ್ ವಿತರಿಸಿದರು, ಪ್ರಮುಖರಾದ ಅಂತನಹಳ್ಳಿ ರಮೇಶ್, ಶಂಕರ್, ಡಿಶ್ ಕುಮಾರ್
ಹಾಗೂ ಇತರರು ಇದ್ದರು.