ಅಂಕೋಲಾ: ಆಗಸ್ಟ್ನಲ್ಲಿ ಸಂಭವಿಸಿದ ಜಲ ಪ್ರವಾಹದಿಂದಾಗಿ ಸಂಪೂರ್ಣವಾಗಿ ಮನೆ ಕಳೆದುಕೊಂಡ ತಾಲೂಕಿನ ಸಗಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಮಗೆಯ ಮಹಿಳೆಗೆ 6 ತಿಂಗಳಾದರೂ ಪರಿಹಾರ ಬಂದಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಂದಾಗಿ ನಿರಾಶ್ರಿತರ ಯಾದಿಯಲ್ಲಿ ಇವರ ಹೆಸರೇ ಇಲ್ಲದಂತಾಗಿದೆ.
ಆಗಸ್ಟ್ ತಿಂಗಳಿನಲ್ಲಿ ವಿಪರೀತ ಮಳೆ ಸುರಿದ ಪರಿಣಾಮ ಗಂಗಾವಳಿ ನದಿ ಉಕ್ಕಿ ಜಲಪ್ರವಾಹ ಉಂಟಾಗಿತ್ತು. ನೂರಾರು ಮನೆಗಳು ನೆಲಸಮವಾದರೆ ಇನ್ನು ಹಲವು ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಮಕ್ಕಳಿಲ್ಲದ ಮಹಿಳೆ ಗುಲಾಬಿ ಗೌಡ ಅವರು ಒಬ್ಬರೇ ಮನೆಯಲ್ಲೇ ವಾಸವಾಗಿದ್ದರು. ಗಂಗಾವಳಿ ನದಿ ಉಕ್ಕಿ ಹರಿದಿದ್ದರಿಂದಾಗಿ ತಗ್ಗು ಪ್ರದೇಶದಲ್ಲಿದ್ದ ಇವರ ಮನೆ ಸಂಪೂರ್ಣ ನೆಲಸಮವಾಗಿತ್ತು. ನೆರೆ ಸಂದರ್ಭದಲ್ಲಿ ಪರಿಹಾರ ಕೇಂದ್ರದಲ್ಲಿ ಉಳಿದ ಇವರು ನಂತರ ಮನೆಗೆ ವಾಪಸ್ಸಾದಾಗ ಮನೆಯ ಅವಶೇಷಗಳೇ ಇಲ್ಲದಂತಾಗಿತ್ತು. ಹೀಗಾಗಿ, ತಾವೇ ಸಣ್ಣ ಗುಡಿಸಲನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದಾರೆ.
ಅತಿವೃಷ್ಟಿ ಸಂತ್ರಸ್ತರಿಗೆ ಸರ್ಕಾರ ಪರಿಹಾರ ಘೊಷಿಸಿದ್ದರೂ ಸರ್ಕಾರಿ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಗುಲಾಬಿ ಅವರಿಗೆ ಪರಿಹಾರ ದೊರೆತಿಲ್ಲ.
ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿಯು ಗುಲಾಬಿ ಅವರ ಮನೆ ಸೇರಿ ಹಲವು ಮನೆಗಳ ಹಾನಿಯ ಪಂಚನಾಮೆ ಮಾಡಿ ಎಲ್ಲಾ ದಾಖಲೆಗಳೊಂದಿಗೆ ತಹಸೀಲ್ದಾರ್ ಕಚೇರಿಗೆ ಸಲ್ಲಿಸಿದ್ದರು. ಆದರೆ, ತಹಸೀಲ್ದಾರ್ ಸಿಬ್ಬಂದಿಯ ನಿರ್ಲಕ್ಷ್ಯ ಪರಿಣಾಮ ಪರಿಹಾರದ ಯಾದಿಯಲ್ಲಿ ಗುಲಾಬಿ ಅವರ ಹೆಸರು ಸೇರ್ಪಡೆಯಾಗಿಲ್ಲ. ಗ್ರಾಮ ಪಂಚಾಯಿತಿ ಹಾಗೂ ತಹಸೀಲ್ದಾರ್ ಕಚೇರಿಗಳ ಕೆಲ ಸಿಬ್ಬಂದಿಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಗುಲಾಬಿ ಅವರಿಗೆ ಸರ್ಕಾರದ ಪರಿಹಾರ ಕೈಗೆಟುಕದೆ ಪರದಾಡುಂತಾಗಿದೆ.
ನನಗೆ ಮನೆ ಮಂಜೂರಿಯಾಗುತ್ತದೆ ಎಂದು ಕಾದು ಕುಳಿತಿದ್ದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಂದ ನಾನು ಸರ್ಕಾರದ ಅನುದಾನದಿಂದ ವಂಚಿತಳಾಗಿದ್ದೇನೆ. ನನ್ನಂತೆಯೇ ಇನ್ನೂ ಹಲವರಿಗೆ ತೊಂದರೆಯಾಗಿದೆ. | ಗುಲಾಬಿ ಜಟ್ಟು ಗೌಡ
ಸಗಡಗೇರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೆರೆ ಸಂತ್ರಸ್ತರನ್ನು ಸರಿಯಾದ ಕ್ರಮದಲ್ಲಿ ಗುರುತಿಸದೆ ನಕಲಿ ನಿರಾಶ್ರಿತರ ಹೆಸರನ್ನು ಫಲಾನುಭವಿಗಳ ಸಾಲಿನಲ್ಲಿ ದಾಖಲಿಸಿ ನೈಜ ಫಲಾನುಭವಿಗಳಿಗೆ ಅನ್ಯಾಯ ಮಾಡಲಾಗಿದೆ. ಹೀಗಾಗಿ ಇವರ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುವುದರ ಜೊತೆಗೆ ಸದ್ಯದಲ್ಲಿಯೇ ಪ್ರತಿಭಟನೆ ನಡೆಸಲಾಗುವುದು. | ದೇವರಾಯ ನಾಯಕ ಅಧ್ಯಕ್ಷರು, ಜಿಲ್ಲಾ ಗ್ರಾಮೀಣ ಯುವ ಹೋರಾಟ ಸಮಿತಿ, ಸಗಡಗೇರಿ
ನಾಗರಾಜ ಮಂಜಗುಣಿ