ನ್ಯೂಸ್

ಮನುಷ್ಯತ್ವ ಅರಳಿಸುವ ಶಿಕ್ಷಣ ಅಗತ್ಯ

ಕಲುಷಿತಗೊಂಡಿರುವ ಮನುಷ್ಯರ ಇಂದಿನ ಮನಸ್ಸುಗಳಿಗೆ 12ನೇ ಶತಮಾನದ ಶರಣರ ಬದುಕು ಶುದ್ಧೀಕರಿಸುವ ಬೆಳಕಾಗಿದೆ ಎಂದು ಬಿಜಿಎಸ್ ಬಿ.ಇಡಿ. ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಬಿ.ಬೆಟ್ಟಸ್ವಾಮಿ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕವು ವಿಜಯನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ವಚನಕಾರರ ಕುರಿತ ಭಾಷಣ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ಗೆಳೆಯರ ಮನಸ್ಸುಗಳಲ್ಲಿ ಸಮಾನತೆ ಸಹಬಾಳ್ವೆ, ಸೃಜನಶೀಲತೆಯ ಸಂಸ್ಕೃತಿಯನ್ನು ಬಿತ್ತುವ ಕೆಲಸ ವಚನಕಾರರ ಓದಿನಿಂದ ಸಾಧ್ಯ ಎಂದು ಹೇಳಿದರು.

‘ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯ ತಂದೆ’ ಎಂಬ ವಚನವನ್ನು ಹೇಳಿ ಪ್ರಾಮಾಣಿಕತೆ ಇಲ್ಲದ ಇವತ್ತಿನ ಸಮಾಜಕ್ಕೆ ಬುದ್ಧಿ, ಭಾವ ಮತ್ತು ಕ್ರಿಯೆಯನ್ನು ಸಮತೋಲನವಾಗಿ ಬೆಳೆಸಿಕೊಳ್ಳಲು ದಿನಕ್ಕೆ ಒಂದಾದರೂ ವಚನಗಳನ್ನು ಓದಿ ಅನುಷ್ಠಾನಕ್ಕೆ ತರುವ ಪ್ರಯತ್ನ ಆಗಬೇಕಾಗಿದೆ ಎಂದರು.

ಮನುಷ್ಯತ್ವವನ್ನು ಅರಳಿಸುವ ಶಿಕ್ಷಣ ಬೇಕಾಗಿದೆ. ಆದರೆ ಇಂದು ಶಿಕ್ಷಣದಲ್ಲಿ, ಮಾಧ್ಯಮಗಳಲ್ಲಿ ಕೆರಳಿಸುವ ಅಂಶಗಳಿವೆಯೇ ಹೊರತು ಅರಳಿಸುವ ಅಂಶಗಳಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಭೂಮಂಡಲದ ಸರ್ವ ಜನಾಂಗದ ಸುಸಂಸ್ಕೃತವಾದ ಬದುಕಿಗೆ ಶರಣರ ಮಾರ್ಗವನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ ಎಂದು ತಿಳಿದಿರುವ ಶರಣ ಸಾಹಿತ್ಯ ಪರಿಷತ್ತು ಈ ದೆಸೆಯಲ್ಲಿ ಶಾಲಾ, ಕಾಲೇಜುಗಳಲ್ಲಿ ಆಯೋಜಿಸುತ್ತಿರುವ ಕಾರ್ಯಕ್ರಮ ಮೆಚ್ಚುವಂತಹದ್ದು ಎಂದರು.

ದತ್ತಿದಾನಿಗಳಾದ ಮೋಹನ್ ಶಂಕರ್ ಮಾತನಾಡಿ, ನಮ್ಮ ಹಿರಿಯರ ನೆನಪಿನಲ್ಲಿ ಮಕ್ಕಳಿಗೆ ನಡೆಸುವ ಜ್ಞಾನದ ಕಾರ್ಯಕ್ರಮ ಸಂತೋಷ ತಂದಿದೆ ಎಂದರು.

ವಿದ್ಯಾರ್ಥಿಗಳು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಶರಣರ ಪರಿಚಯ ಮಾಡಿಸಿಕೊಟ್ಟರು. ವೇಷಭೂಷಣದೊಂದಿಗೆ ಮಾತನಾಡಿದ್ದು ವಿಶೇಷವಾಗಿತ್ತು. ಸ್ಪರ್ಧೆಯಲ್ಲಿ ಐಶ್ವರ್ಯಾ, ಯಶಸ್ವಿನಿ, ನಿಸರ್ಗ, ಪೂಜಾ, ಮನೋಜ್, ಯೋಗಿತಾ ಬಹುಮಾನ ಪಡೆದರು.

ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ, ಮುಖ್ಯ ಶಿಕ್ಷಕ ವಿ.ನಾಗೇಶ್, ಜೆಎಸ್‌ಎಸ್ ಪಿಯು ಕಾಲೇಜು ಪ್ರಾಂಶುಪಾಲ ಎ.ಆರ್.ಕಾಂತರಾಜು ಇತರರಿದ್ದರು.