ಕಡೂರು ತಾಲೂಕಿನ ಜಿ. ಯರದಕೆರೆ ಗ್ರಾಮದಲ್ಲಿ ಅಜ್ಜಂಪುರ ವಲಯ ವ್ಯಾಪ್ತಿಯ 1917ನೇ ಮದ್ಯವರ್ಜನ ಶಿಬಿರವನ್ನು ಶಿಬಿರಾರ್ಥಿಗಳು ಉದ್ಘಾಟಿಸಿದರು. ಮಂಜುನಾಥ್, ಚಂದನಾ ಸತೀಶ್, ನಾಗರಾಜ್, ಮಂಜು, ಬೋರೀಶ್, ರುದ್ರಪ್ಪ ಮತ್ತಿತರರಿದ್ದರು. 
ನ್ಯೂಸ್

ಮದ್ಯಪಾನದಿಂದ ಅಪರಾಧ ಪ್ರಕರಣ ಹೆಚ್ಚಳ

ಕಡೂರು: ಮದ್ಯಪಾನದಿಂದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು ಮದ್ಯವ್ಯಸನ ಮುಕ್ತ ಸಮಾಜ ನಿರ್ಮಿಸಿದಾಗ ಆರೋಗ್ಯಕರ ವಾತಾವರಣ ಮೂಡಲು ಸಾಧ್ಯ ಎಂದು ಯಗಟಿ ಪಿಎಸ್‌ಐ ಜಿ. ಮಂಜುನಾಥ್ ತಿಳಿಸಿದರು.

ತಾಲೂಕಿನ ಜಿ.ಯರದಕೆರೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಜ್ಜಂಪುರ ವಲಯ ವ್ಯಾಪ್ತಿಯ 1917ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿ, ಬಹುತೇಕ ಕುಡಿತದ ವ್ಯಸನಿಗಳಿಂದ ಗಲಾಟೆ, ಅಸಭ್ಯ ವರ್ತನೆ, ಲೈಂಗಿಕ ಕಿರುಕುಳ, ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ವರದಿಯಾಗುತ್ತಿದೆ. ಇದರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿಗೆ ಕಾರಣವಾಗುತ್ತಿದೆ. ಇವುಗಳ ನಿಯಂತ್ರಣಕ್ಕೆ ಮದ್ಯವರ್ಜನ ಶಿಬಿರಗಳು ಸಹಕಾರಿ ಎಂದರು.

ಮದ್ಯವ್ಯಸನಿಯಾದ ವ್ಯಕ್ತಿಯನ್ನು ಪರಿಪೂರ್ಣ ಬದಲಾಯಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಕಾರ್ಯವೈಖರಿ ಶ್ಲಾಘನೀಯ. ಇತ್ತೀಚಿನ ದಿನಗಳಲ್ಲಿ ಯುವ ಸಮೂಹವೇ ಹೆಚ್ಚು ಕುಡಿತಕ್ಕೆ ದಾಸರಾಗಿರುವುದು ಆತಂಕಕಾರಿ ಸಂಗತಿ. ಭವಿಷ್ಯದ ದಿನಗಳ ಬಗ್ಗೆ ಅರಿವಿನ ಪ್ರಜ್ಞೆ ಕಳೆದುಕೊಂಡಿರುವುದು ವಿರ್ಪರ್ಯಾಸ. ಆರೋಗ್ಯ ಕಾಪಾಡಿಕೊಳ್ಳಲು ಹೆಚ್ಚು ಒತ್ತು ನೀಡಬೇಕು ಎಂದರು.

ಗ್ರಾಪಂ ಉಪಾಧ್ಯಕ್ಷೆ ಚಂದನಾ ಸತೀಶ್, ಗ್ರಾಪಂ ಸದಸ್ಯ ಲೋಹಿತ್, ಜನಜಾಗೃತಿ ಯೋಜನಾಧಿಕಾರಿ ನಾಗರಾಜ್ ಕೊಲಾಲ್, ಕೋಣಂದೂರು ಮಂಜು, ಡಿ. ಬೋರೀಶ್, ರುದ್ರಪ್ಪ, ನಾಗಮಣಿ, ಕವಿತಾ ಇದ್ದರು.