ನ್ಯೂಸ್

ಮದ್ಯ ವ್ಯಸನಕ್ಕೆ ಬಿದ್ದವರಲ್ಲಿ ಜಾಗೃತಿ ಮೂಡಿಸಿ


ಹನಗೋಡು: ಕುಡಿತ ಮತ್ತು ಅಮಲು ಪದಾರ್ಥಗಳ ಸೇವನೆ ಕುಟುಂಬಗಳನ್ನು ಹಾಳು ಮಾಡುತ್ತಿದ್ದು, ವಿದ್ಯಾವಂತ ಯುವಕ, ಯುವತಿಯರು ತಮ್ಮ ಕುಟುಂಬ ಹಾಗೂ ಗ್ರಾಮಗಳಲ್ಲಿ ಅಮಲಿನ ಚಟಕ್ಕೆ ಬಿದ್ದಿರುವವರಲ್ಲಿ ಜಾಗೃತಿ ಮೂಡಿಸಬೇಕೆಂದು ಸಂಪನ್ಮೂಲ ವ್ಯಕ್ತಿ ಸೋಮಶೇಖರ್ ಸಲಹೆ ನೀಡಿದರು.


ಹನಗೋಡಿನ ಲಕ್ಷ್ಮಣತೀರ್ಥ ವಿದ್ಯಾಸಂಸ್ಥೆಯ ಪ್ರೌಢಶಾಲಾ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಭಾನುವಾರ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಯೋಜನೆ ಪರಿಚಯ ಕಾರ್ಯಕ್ರಮದಲ್ಲಿ ಮಾತನಾಡಿದರು.


ಕುಡಿತದ ಚಟ ಹೊಂದಿರುವ ವ್ಯಕ್ತಿಯನ್ನು ಸಮಾಜವು ನಿಷ್ಕೃಷ್ಟದಿಂದ ಕಾಣುತ್ತದೆ, ಅಲ್ಲದೆ ಶಿಕ್ಷಣ ಪಡೆಯಬೇಕಾದ ಮಕ್ಕಳ ಹಾಗೂ ಕುಟುಂಬದ ಮಹಿಳೆಯ ಮೇಲೂ ಗಂಭೀರ ಪರಿಣಾಮ ಬೀರಲಿದೆ. ಅದೆಷ್ಟೋ ಶ್ರೀಮಂತ ಕುಟುಂಬಗಳು ಅದರಲ್ಲೂ ಐಷಾರಾಮಿ ಜೀವನಕ್ಕೆ ಮಾರುಹೋಗಿರುವ ಸುಶಿಕ್ಷಿತ ಮಹಿಳೆಯರೂ ಕುಡಿತದ ಚಟಕ್ಕೆ ಬಲಿಯಾಗಿರುವುದನ್ನು ಕಾಣುತ್ತಿರುವುದರಿಂದ ನೀವು ಇಂತಹ ಅನಿಷ್ಠ ಪಿಡುಗುಗಳಿಂದ ದೂರ ಉಳಿದು, ದುಶ್ಚಟಕ್ಕೆ ಬಲಿಯಾಗಿರುವವರಲ್ಲಿ ಜಾಗೃತಿ ಮಾಡಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.


ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕೆ.ಪಿ.ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತ್ತಿದ್ದು, ವಿದ್ಯಾರ್ಥಿಗಳು ತಮ್ಮ ಪಾಲಕರ ಅಭಿಲಾಷೆಯಂತೆ ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರಗತಿ ಸಾಧಿಸಬೇಕು. ಶಿಕ್ಷಣಕ್ಕೆ ಮಾತ್ರ ಒತ್ತು ನೀಡದೆ ಉತ್ತಮ ಸಂಸ್ಕಾರ ಕಲಿತಲ್ಲಿ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.


ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಟರಾಜ್ ಮಾತನಾಡಿ, ಮದ್ಯ ವ್ಯಸನ, ಗುಟ್ಕಾ, ಧೂಮಪಾನಗಳಿಂದ ಯುವ ಜನತೆಯ ಜೀವನ ಹಾಳಾಗುತ್ತಿದೆ. ಒಮ್ಮೆ ದುಶ್ಚಟಗಳಿಗೆ ದಾಸರಾದರೆ ಬದುಕು ವಿನಾಶದ ಹಾದಿಯಲ್ಲಿ ಸಾಗುತ್ತದೆ ಇದರಿಂದ ವೈಯಕ್ತಿಕ ಜೀವನದ ಜತೆಗೆ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದರು.


ಸಮಾರಂಭದಲ್ಲಿ ಜಿಲ್ಲಾ ಜನ ಜಾಗೃತಿ ಸಮಿತಿ ಸದಸ್ಯ ದಾ.ರಾ.ಮಹೇಶ್, ಮೇಲ್ವಿಚಾರಕಿ ಪುಷ್ಪಲತಾ, ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷೆ ನಾಗಮ್ಮ, ಸೇವಾ ಪ್ರತಿನಿಧಿಗಳಾದ ರವಿ, ಗಣೇಶ ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.