ನ್ಯೂಸ್

ಮದ್ದೇರಿ ಗ್ರಾಮದ ಅಭಿವೃದ್ಧಿಗೆ ಮೂರು ಪಕ್ಷಗಳು ಒಂದಾಗಬೇಕು / ಮಾಜಿ ಸಚಿವ ವರ್ತೂರ್ ಪ್ರಕಾಶ್ ಅಭಿಪ್ರಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಯಾವುದೇ ಗ್ರಾಮ ಅಭಿವೃದ್ಧಿಯಾಗಬೇಕಾದರೆ ಗ್ರಾಮಗಳಲ್ಲಿ ಪಕ್ಷ ರಾಜಕೀಯ ಬಿಡಬೇಕು. ಆಗ ಮಾತ್ರ ಗ್ರಾಮಗಳು ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಮದ್ದೇರಿ ಗ್ರಾಮ ಅಭಿವೃದ್ದಿಯಾಗಲು ಮೂರು ಪಕ್ಷಗಳು ಒಂದಾಗಬೇಕು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದರು.

ಕೋಲಾರ ತಾಲೂಕು ವೇಮಗಲ್ ಹೋಬಳಿ ಮದ್ದೇರಿ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಸರಿಗಮಪ ಸೀಸನ್ ೧೧ರ ಕಲಾವಿದರಿಂದ ಹಮ್ಮಿಕೊಳ್ಳಲಾಗಿದ್ದ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾನು ಎರಡು ಬಾರಿ ಕೋಲಾರದಲ್ಲಿ ಶಾಸಕರಾಗಿದ್ದಾಗ, ಕೋಲಾರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನನ್ನ ಅವಧಿಯಲ್ಲಿ ಪ್ರತಿ ಗ್ರಾಮಕ್ಕೂ ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ರೈತರ ಹೊಲಗಳಲ್ಲಿ ಚೆಕ್ಕು ಡ್ಯಾಮ್‌ಗಳು, ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆ ಬಾವಿಗಳು ನಾನು ಮಾಡಿದ್ದೇನೆ. ಇಂದಿಗೂ ಸಹ ನಾನು ಸರ್ಕಾರದಿಂದ ಮಾಡಿಸಿಕೊಂಡು ಬಂದಿರುವ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿವೆ ಎಂದರು.

ನಮ್ಮ ಕ್ಷೇತ್ರ ನಮ್ಮ ಗ್ರಾಮ ಅಭಿವೃದ್ಧಿಪಡಿಸಬೇಕೆಂಬ ಮನಸ್ಸಿದ್ದರೆ ಏನು ಬೇಕಾದರೂ ಸಹ ಮಾಡಬಹುದು ಎಂಬುದಕ್ಕೆ ಸಾಕ್ಷಿ ಡಿಸಿಪಿ ದೇವರಾಜ್ ರವರು ಕೋಲಾರದ ಎಸ್.ಪಿ.ಯಾಗಿ ಕಾರ್ಯನಿರ್ವಹಿಸಿದಾಗ ಅವರ ಸ್ವಂತ ಊರಿನಲ್ಲಿ ದೇವಾಲಯದ ಅಭಿವೃದ್ಧಿ, ಶಾಲೆ ಕ್ರಿಕೆಟ್ ಆಟದ ಮೈದಾನ ಇನ್ನು ಮುಂತಾದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿದ್ದಾರೆ. ನಮ್ಮ ಗ್ರಾಮ ನಮ್ಮ ಕ್ಷೇತ್ರ ಎಂಬ ಸ್ವಾಭಿಮಾನ ಅವರಿಗೆ ಇರುವುದರಿಂದ ಇಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿರುತ್ತಾರೆ. ಮುಂದಿನ ದಿನಗಳಲ್ಲಿ ನಾನು ಸಿಎಂ ಆರ್ ಶ್ರೀನಾಥ್, ಡಿಸಿಪಿ ದೇವರಾಜ್ ರವರಿಂದ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತೇವೆ. ನಿಮ್ಮ ನಿಮ್ಮ ಗ್ರಾಮಗಳಲ್ಲಿ ಪಕ್ಷ ಬೇಧ ಮರೆತು ಗ್ರಾಮದ ಅಭಿವೃದ್ಧಿಗಾಗಿ ಮೂರು ಪಕ್ಷದ ಮುಖಂಡರು ಒಂದಾಗಿ ಗ್ರಾಮವನ್ನು ಮುನ್ನಡೆಸುವ ಕೆಲಸ ಮಾಡಬೇಕು ಆಗ ಮಾತ್ರ ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎಂದು ತಿಳಿಸಿದರು.

ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಮಾಡಿರುವ ಅಭಿವೃದ್ಧಿ ಕೆಲಸಗಳು ಇಂದು ಕ್ಷೇತ್ರದಲ್ಲಿ ಗಟ್ಟಿಯಾಗಿ ನೆಲೆ ನಿಂತಿದ್ದಾವೆ. ಅವುಗಳನ್ನು ನಾವು ನೀವು ಸಹ ನೋಡಿದ್ದೇವೆ. ಜಾತ್ರೆ ಮಹೋತ್ಸವಗಳಲ್ಲಿ ಗ್ರಾಮಸ್ಥರೆಲ್ಲ ಒಟ್ಟಾಗಿ ಸೇರಿ ಈ ರೀತಿ ಕಾರ್ಯಕ್ರಮ ಮಾಡುವುದರಿಂದ ಗ್ರಾಮದ ಒಗ್ಗಟ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಡಿಸಿಪಿ ದೇವರಾಜ್ ಮಾತನಾಡಿ, ಕೋಲಾರ ಜಿಲ್ಲೆ ಮತ್ತು ತಾಲೂಕು ಈ ದೇಶಕ್ಕೆ ಮಾದರಿಯಾಗಬೇಕು. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಗ್ರಾಮದ ಮುಖಂಡರು ಒಂದಾಗಬೇಕು. ಗ್ರಾಮದ ಹಿರಿಯರು ಕಿರಿಯರು ಯುವಕರು ಒಗ್ಗಟ್ಟು ಮತ್ತು ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದರ ಮುಖಾಂತರ ಹೆಚ್ಚು ಯುವಕರನ್ನು ಸಮಾಜ ಸೇವೆ ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತಂದುಕೊಡಬೇಕು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಿ ಎಸ್ ವೆಂಕಟೇಶ್, ಬಂಕ್ ಮಂಜುನಾಥ್, ಕಲಾವಿದ ಪಿ ಮುನಿರೆಡ್ಡಿ, ಚನ್ನಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ದೀಪ ಎಸ್ ರಾಮೇಗೌಡ, ಬೀಚ್ಗೊಂಡಹಳ್ಳಿ ದಿಲೀಪ್, ಮದ್ದೇರಿ ರೇಷ್ಮೆ ಬೆಳೆಗಾರ ಸಹಕಾರ ಸಂಘದ ನಿರ್ದೇಶಕ ಮಲ್ಲಂಡಳ್ಳಿ ಸುರೇಶ್,ಹಾಗೂ ಮದ್ದೇರಿ ಗ್ರಾಮದ ಮುಖಂಡರು ಮತ್ತು ಯುವಕರು ಹಾಜರಿದ್ದರು.

ಚಿತ್ರ ೧೩ ಕೆ.ಎಲ್.ಆರ್. ೦೧ : ಕೋಲಾರ ತಾಲೂಕು ವೇಮಗಲ್ ಹೋಬಳಿ ಮದ್ದೇರಿ ಶ್ರೀ ಕೋದಂಡ ರಾಮಸ್ವಾಮಿ ಬ್ರಹ್ಮ ರಥೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಸರಿಗಮಪ ಸೀಸನ್ ೧೧ರ ಕಲಾವಿದರಿಂದ ಹಮ್ಮಿಕೊಳ್ಳಲಾಗಿದ್ದ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಚಿವ ವರ್ತೂರು ಪ್ರಕಾಶ್, ಡಿಸಿಪಿ ದೇವರಾಜ್, ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮುಂತಾದವರು ಇದ್ದರು.