ನ್ಯೂಸ್

ಮದಕರಿನಾಯಕರ ಜಯಂತ್ಯುತ್ಸವ ಅ. 13ಕ್ಕೆ

ಚಿತ್ರದುರ್ಗ: ರಾಜವೀರ ಮದಕರಿನಾಯಕರ ಜಯಂತ್ಯುತ್ಸವದ ಅಂಗವಾಗಿ ಅ. 13ರಂದು ಅದ್ಧೂರಿ ಮೆರವಣಿಗೆ ನಡೆಸಲು ನಾಯಕ ಸಮಾಜ ತೀರ್ಮಾನಿಸಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಶೋಧಕರು, ಸಮಾಜದ ಮುಖಂಡರ ಸಲಹೆ ಪಡೆದು ಮದಕರಿನಾಯಕರ ನೂತನ ಭಾವಚಿತ್ರದೊಂದಿಗೆ ಆಚರಿಸಲಿದ್ದೇವೆ. ಅದಕ್ಕಾಗಿ ಕ್ರಿಯೇಟಿವ್ ವೀರೇಶ್ ಅವರು ಪಾಳೇಗಾರರಿಗೆ ಹೋಲುವ ಮಾದರಿಯಲ್ಲಿ ಚಿತ್ರ ಬಿಡಿಸಲಿದ್ದಾರೆ ಎಂದು ಹೇಳಿದರು.

ಇನ್ನು ಮುಂದೆ ಸರಳ ಆಚರಣೆ ಇರುವುದಿಲ್ಲ. ಈ ಬಾರಿಯಿಂದ ಜಯಂತ್ಯುತ್ಸವ ಕಳೆಗಟ್ಟಲಿದೆ. ಬೇರೆ ಕಡೆಗಳಲ್ಲಿ ಆಚರಿಸುತ್ತಿದ್ದರೂ ಕೋಟೆನಗರಿಯ ಉತ್ಸವ ಜನಮಾನಸದಲ್ಲಿ ಅಚ್ಚಳಿಯದೇ ಉಳಿದು, ಮುಂದಿನ ದಿನಗಳಲ್ಲಿ ರಾಜ್ಯ ವ್ಯಾಪಿ ಅದ್ಧೂರಿಯಾಗಿ ನಡೆಯಬೇಕು. ಆ ನಿಟ್ಟಿನಲ್ಲಿ ಸಿದ್ಧತೆ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.

ಪ್ರತಿ ವರ್ಷ ಮದಕರಿನಾಯಕರ ಸ್ಮರಣೋತ್ಸವ ಮೇ 15ರಂದು ಆಚರಿಸುತ್ತಿದ್ದು, ಅದು ವೇದಿಕೆ ಕಾರ್ಯಕ್ರಮವಾಗಿದೆ. ಜಯಂತ್ಯುತ್ಸವದಲ್ಲಿ ಮೆರವಣಿಗೆ ಮಾತ್ರ ನಡೆಯಲಿದೆ. ಡಿಜೆ ಜೊತೆಗೆ ವಿವಿಧ ಕಲಾತಂಡಗಳು ಭಾಗವಹಿಸಲಿವೆ. ಎಲ್ಲಾ ಸಮಾಜದವರು ಸಹಕಾರ ನೀಡುವ ವಿಶ್ವಾಸವಿದೆ ಎಂದರು.

ನಾಯಕ ಸಮಾಜದ ಜಿಲ್ಲಾ ಅಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ ಮಾತನಾಡಿ, ರಾಜ್ಯದ ಗಣ್ಯರಿಂದ ಮೆರವಣಿಗೆಗೆ ಚಾಲನೆ ದೊರೆಯಲಿದೆ. ವಿವಿಧ ಮಠಾಧೀಶರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸಮಾಜದ ಮುಖಂಡರಾದ ಗೋಪಾಲಸ್ವಾಮಿ ನಾಯಕ, ಸೋಮು, ಸ್ವಾಮಿ ಇದ್ದರು.