ಗುಂಡ್ಲುಪೇಟೆ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ನಿರಂಜನ್‌ಕುಮಾರ್ ವಿಶ್ವಾಸವ್ಯಕ್ತಪಡಿಸಿದರು.
ಚುನಾವಣಾ ಪ್ರಚಾರದ ಅಂಗವಾಗಿ ಸೋಮವಾರ ತಾಲೂಕಿನ ಸ್ಕಂದಗಿರಿ ಪಾರ್ವತಾಂಬ ಬೆಟ್ಟದಲ್ಲಿ ಪತ್ನಿ ಸವಿತಾ ಹಾಗೂ ಪಕ್ಷದ ಮುಖಂಡರ ಜತೆಗೂಡಿ ಸೋಮೇಶ್ವರಸ್ವಾಮಿ ಮತ್ತು ಪಾರ್ವತಾಂಬೆಗೆ ಪೂಜೆ ಸಲ್ಲಿಸಿ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮ್ಮದು ನಾಯಕತ್ವ ಪಕ್ಷ ವಿಶ್ವದ ಜನಪ್ರಿಯ ನಾಯಕನ ಮುಂದಾಳತ್ವದಲ್ಲಿ ಭಾರತ ವಿಶ್ವ ಮನ್ನಣೆ ಪಡೆಯುತ್ತಿದೆ. ಆದರೆ ಕಾಂಗ್ರೆಸ್ ಪಕ್ಷವನ್ನು ಯಾವ ರಾಜ್ಯದಲ್ಲಿಯೂ ಒಪ್ಪುತ್ತಿಲ್ಲ. ಹೀಗಾಗಿಯೇ ಕಾಂಗ್ರೆಸ್ ನಾಯಕ ಹೋದ ಕಡೆಯಲ್ಲ ಕಾಂಗ್ರೆಸ್ ಪಕ್ಷ ಸೋತು ಸುಣ್ಣವಾಗಿದೆ. ಇದಕ್ಕೆ ಉದಾಹರಣೆ ಕಳೆದ ತಿಂಗಳು ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರುವುದಿಲ್ಲ. ಸಮರ್ಥ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಂದಿರುವ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳನ್ನು ಮತದಾರರ ಮನೆ ಮನೆಗೆ ತಿಳಿಸುವ ಮೂಲಕ ತಮ್ಮ ಸರಕಾರದ ಸಾಧನೆಗಳ ಆಧಾರದ ಮೇಲೆ ಮತ ಕೇಳುವುದಾಗಿ ಹೇಳಿದರು.
25 ವರ್ಷಗಳಿಂದ ಆಡಳಿತ ನಡೆಸಿದವರು ಅಭಿವೃದ್ಧಿಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಕಳೆದ ಐದು ವಷರ್ಗಳಿಂದ ತಾಲೂಕಿನಾದ್ಯಂತ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಲಾಗಿದೆ. ಜನರ ಸಮಸ್ಯೆಗಳನ್ನು ಆಲಿಸಲು ಜನ ಸಂಪರ್ಕ ಸಭೆ ಮಾಡಿ ಜನರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಅಲ್ಲದೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಆಗಿದೆ ಇದನ್ನು ವಿರೋಧ ಪಕ್ಷದವರು ನಮ್ಮ ಅವಧಿಯಲ್ಲಿ ಆದ ಯೋಜನೆ ಎಂದು ಅಪಪ್ರಚಾರ ಮಾಡುತ್ತಾರೆ ಈ ಯೋಜನೆಯನ್ನು ಮುಗಿಸಲು 25 ವಷರ್ಗಳು ಬೇಕಾಗಿತ್ತಾ ಎಂದು ಪ್ರಶ್ನಿಸಿದರು.
ಪಟ್ಟಣದಲ್ಲಿ 1058 ನಿವೇಶನ ಹಂಚಿಕೆ ಮಾಡಲಾಗಿದ್ದು, ಹಲವಾರು ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ ಕುಡಿಯುವ ನೀರಿನ ಬವಣೆ ಹೋಗಲಾಡಿಸಲು 34 ಹಳ್ಳಿಗಳಿಗೆ ಎಕ್ಸ್‌ಪ್ರೆಸ್ ಲೈಫ್ ಯೋಜನೆ ಜಾರಿಗೆ ತರಲಾಗಿದೆ. ಸುಮಾರು 500 ರಿಂದ 600 ಜನರಿಗೆ ಸಾಗುವಳಿ ಪತ್ರ ವಿತರಿಸಲಾಗಿದೆ ಇದೆಲ್ಲವೂ ಅಭಿವೃದ್ಧಿ ಕಾರ್ಯಗಳಲ್ಲವೇ ಎಂದು ಪ್ರಶ್ನಿಸಿದರು.
ನಾನು ಮೂರು ಬಾರಿ ಚುನಾವಣೆಯಲ್ಲಿ ನಿಂತು ಸೋತಾಗಲೂ, ನಂತರ ಚುನಾವಣೆಯಲ್ಲಿ ಗೆದ್ದಾಗಲೂ ಕ್ಷೇತ್ರದ ಜನರ ಜತೆಗಿದ್ದು, ಕರೊನಾ ಸಮಯದಲ್ಲಿ ಜನರ ನೋವುಗಳನ್ನು ಹತ್ತಿರದಿಂದ ಕಂಡಿದ್ದೇನೆ. ನಮ್ಮ ಆಡಳಿತ ಅವಧಿಯಲ್ಲಿ ವಿಶೇಷ ಯೋಜನೆಗಳು ಸೇರಿದಂತೆ ತಾಲೂಕಿನ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಕಾರ್ಯ ಮಾಡಿದ್ದೇನೆ. ಪರಿಶಿಷ್ಟ ಜಾತಿ, ಪಂಗಡ, ಸೇರಿದಂತೆ ಸಾಮಾನ್ಯ ವರ್ಗದ ಜನರು ವಾಸಮಾಡುವ ಬೀದಿಯಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ 50 ಗ್ರಾಮ ಅಯ್ಕೆ ಮಾಡಿಕೊಂಡು ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ಜನಪರ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, 800 ಕೋಟಿ ರೂ. ಗಳಿಗೂ ಹೆಚ್ಚು ಅನುದಾನ ತರುವ ಮೂಲಕ ತಾಲೂಕನ್ನು ಅಭಿವೃದ್ಧಿ ಮಾಡಲಾಗಿದೆ. ಬಿಜೆಪಿ ದಲಿತರ ವಿರೋಧಿ ಎಂದು ಬಿಂಬಿಸಲಾಗುತಿತ್ತು. ಆದರೆ ಅದೇ ಬಿಜೆಪಿ ಪಕ್ಷ ದಲಿತ ಮತ್ತು ಹಿಂದುಳಿದ ಸಮುದಾಯಕ್ಕೆ ನ್ಯಾಯ ಒದಗಿಸುವುದರ ಮೂಲಕ ಎಲ್ಲ ವರ್ಗಗಳನ್ನು ಸಮಾನತೆಯಿಂದ ಕಾಣುತ್ತಿದೆ ಎಂದರು.
ಬಿಜೆಪಿ ಮಂಡಲಾಧ್ಯಕ್ಷ ಡಿ.ಪಿ.ಜಗದೀಶ್, ಮಾಜಿ ಅಧ್ಯಕ್ಷ ಎನ್.ಮಲ್ಲೇಶ್, ವೀರಶೈವ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಕೊಡಸೋಗೆ ಶಿವಬಸಪ್ಪ, ಬಗರ್‌ಹುಕುಂ ಸಮಿತಿಯ ಉಪಾಧ್ಯಕ್ಷ ನಿಟ್ರೆ ನಾಗರಾಜಪ್ಪ, ಯುವ ಮೊರ್ಚಾ ಜಿಲ್ಲಾಧ್ಯಕ್ಷ ಪ್ರಣಯ್, ಎಪಿಎಂಸಿ ಅಧ್ಯಕ್ಷ ರವಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಹೊರೆಯಾಲ ಮಹೇಶ್, ಮಾಧ್ಯಮ ವಕ್ತಾರ ಎಸ್.ಸಿ.ಮಂಜುನಾಥ್, ಗ್ರಾಮಪಂಚಾಯಿತಿ ಸದಸ್ಯ ಎಸ್.ಟಿ.ಮಹದೇವಸ್ವಾಮಿ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಇದ್ದರು.