ಸಾಗರದಲ್ಲಿ ಆಯೋಜಿಸಿದ್ದ ಕರಕುಶಲ ತರಬೇತಿ ಮಣ್ಣೇ ಹೊನ್ನು ಕಾರ್ಯಾಗಾರಕ್ಕೆ ಪಟ್ಟಣ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು ಚಾಲನೆ ನೀಡಿದರು. ರಾಜೇಶ್ವರಿ ಕೊಡಗು, ಎಚ್.ಎಸ್.ರೋಹಿಣಿ, ಎಂ.ವಿ.ಪ್ರತಿಭಾ ಇತರರರಿದ್ದರು.  
ನ್ಯೂಸ್

ಮಣ್ಣಿನ ಆಭರಣ ಸ್ವಾಭಿಮಾನದ ಸಂಕೇತ

ಸಾಗರ: ಮಣ್ಣಿನ ಆಭರಣಗಳು ಹೆಚ್ಚು ಜನಪ್ರಿಯಗೊಳ್ಳುತ್ತಿವೆ. ಅಲ್ಲದೆ ಅವು ನೆಲದ ಸೊಗಡನ್ನು ಎತ್ತಿ ಹಿಡಿಯಲು ಸಹಕಾರಿಯಾಗಿದೆ ಎಂದು ಪಟ್ಟಣ ಮಹಿಳಾ ಸಮಾಜದ ಅಧ್ಯಕ್ಷೆ ನಂದಾ ಗೊಜನೂರು ತಿಳಿಸಿದರು.

ಸಾಗರದ ಶಿವಪ್ಪನಾಯಕ, ನಗರದ ಭೂಮಿ ರಂಗಮನೆಯಲ್ಲಿ ಸೋಮವಾರ ಜೀವನ್ಮುಖಿ ಹಾಗೂ ಚರಕ ಸಂಸ್ಥೆಯಿಂದ ಆಯೋಜಿಸಿದ್ದ ನಾಲ್ಕು ದಿನಗಳ ಕರಕುಶಲ ತರಬೇತಿ ಮಣ್ಣೇ ಹೊನ್ನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಣ್ಣಿನ ಆಭರಣ ತೊಡುವುದು ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ. ನಾವೇ ತಯಾರಿಸಿ, ನಾವೇ ಧರಿಸುವುದರಿಂದ ಸಂತೋಷ ಹೆಚ್ಚುತ್ತದೆ. ದಿನನಿತ್ಯದ ಒತ್ತಡದ ಬದುಕಿನ ನಡುವೆ ಇಂತಹ ಕಾರ್ಯಾಗಾರಗಳಲ್ಲಿ ತೊಡಗಿ ಹೊಸ ವಿಷಯಗಳನ್ನು ಅರಿತುಕೊಳ್ಳುವುದು ಸೂಕ್ತ ಎಂದು ಹೇಳಿದರು.

ನಮ್ಮ ನಾಗರಿಕತೆ ಜತೆಗೆ ಮಣ್ಣಿನ ಆಭರಣಗಳ ಬಳಕೆಯೂ ಬೆಳೆದು ಬಂದಿದೆ. ನಮ್ಮ ಸೃಜನಶೀಲತೆ, ಸಂಸ್ಕೃತಿಯನ್ನು ಮಣ್ಣಿನ ಆಭರಣಗಳು ಸಾಕ್ಷೀಕರಿಸುತ್ತವೆ. ಇಂತಹ ಕರಕುಶಲ ಕಲೆಯನ್ನು ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳಬೇಕು. ನೀವು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸುವ ಮೂಲಕ ಕಲೆಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ಕಲಾವಿದೆ ರಾಜೇಶ್ವರಿ ಕೊಡಗು ಮಾತನಾಡಿ, ಮಣ್ಣಿನ ಆಭರಣಗಳ ಬಳಕೆಗೆ ದೊಡ್ಡ ಇತಿಹಾಸವಿದೆ. ಗ್ರೀಕರ ಕಾಲದಲ್ಲಿ ಮಣ್ಣಿನ ಆಭರಣ ಧರಿಸುತ್ತಿದ್ದುದು ಇತಿಹಾಸದಲ್ಲಿ ಉಲ್ಲೇಖವಾಗಿದೆ. ರಾಜಮಹಾರಾಜರ ಕಾಲದಲ್ಲಿ ಮಣ್ಣಿನ ಆಭರಣ ಭಾರತದಲ್ಲಿಯೂ ಬಳಕೆಯಾಗಿವೆ. ಪ್ರಸ್ತುತ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಜಾಗೃತಿ ಅಗತ್ಯ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಎಚ್.ಎಸ್.ರೋಹಿಣಿ, ಜೀವನ್ಮುಖಿ ಸಂಸ್ಥೆಯ ಎಂ.ವಿ.ಪ್ರತಿಭಾ ಇತರರರಿದ್ದರು.