ನಂಜನಗೂಡು ತಾಲೂಕು ಕುಪ್ಪರವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಮಡಿವಾಳ ಜನಾಂಗದವರ ಜಾಗೃತ ಸಮಾವೇಶವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. 
ನ್ಯೂಸ್

ಮಡಿವಾಳ ಸಮುದಾಯ ಅಭಿವೃದ್ಧಿಗೆ ಸಹಾಯ

ನಂಜನಗೂಡು: ಮುಂಬರುವ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ನಿಶ್ಚಿತವಾಗಿದ್ದು ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಮಡಿವಾಳ ಸಮುದಾಯದ ಶ್ರೇಯೋಭಿವೃದ್ಧಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ತಾಲೂಕಿನ ಕುಪ್ಪರವಳ್ಳಿ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ಮಡಿವಾಳರ ಸಂಘದಿಂದ ಆಯೋಜಿಸಿದ್ದ ಮಡಿವಾಳರ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್‌ನಿಂದ ಮಡಿವಾಳ ಜನಾಂಗಕ್ಕೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡಲಾಗುವುದು. ಮಡಿವಾಳ ಸಮುದಾಯದ ಜನರ ಬೇಡಿಕೆಯಂತೆ ಸಮುದಾಯದ ಒಬ್ಬರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗುವುದು. ಇನ್ನು ಮಡಿವಾಳ ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಆದರೆ, ಯಾವುದೇ ಸಮದಾಯವನ್ನು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರ್ಪಡೆ ಮಾಡುವ ಅಧಿಕಾರವಿರೋದು ಕೇಂದ್ರ ಸರ್ಕಾರಕ್ಕೆ. ಹೀಗಾಗಿ ಈ ಬಗ್ಗೆ ಮುಂಬರುವ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಮಡಿವಾಳ ಸಂಘದ ಗೌರವಾಧ್ಯಕ್ಷ ಕೆ.ಎಸ್.ರವಿಕುಮಾರ್ ಮಾತನಾಡಿ, ಮಡಿವಾಳ ಜನಾಂಗದವರು ಪ್ರಗತಿ ಸಾಧಿಸುವ ಸಲುವಾಗಿ ಸಂಘಟಿತರಾಗಬೇಕಿದೆ. ಇನ್ನು ರಾಜಕೀಯವಾಗಿ ತೀರಾ ಹಿಂದುಳಿದಿರುವ ಮಡಿವಾಳ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ನಂಜಪ್ಪ, ಗೋಪಿಕೃಷ್ಣ, ಎಂ.ರಾಮಯ್ಯ, ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಅಮರ್‌ನಾಥ್, ವರುಣಾ ಮಹದೇವು, ಕಿರಾಳು ಸಂತೋಷ್, ನಂಜನಗೂಡು ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಹೆಜ್ಜಿಗೆ ಪ್ರಸನ್ನ ಕುಮಾರ್, ತಿ.ನರಸೀಪುರ ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಕುರುಬೂರು ಮಹದೇವಸ್ವಾಮಿ, ಜಯರಾಂ, ಶಿವಣ್ಣ, ಮಾದುರಾಜು, ವರುಣಾ ಮಹದೇವು, ಬಸವರಾಜು, ಕಾರ್ಯದರ್ಶಿ ಆಲಗೂಡು ಬಸವರಾಜು ಭಾಗವಹಿಸಿದ್ದರು.