ಆಲ್ದೂರು: ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಬೃಹನ್ಮಠದಲ್ಲಿ ಶನಿವಾರ ಕಾರ್ತಿಕ ದೀಪೋತ್ಸವ ಜರುಗಿತು. ಬೇರುಗಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ತಿಕ ಮಾಸ ಎಂದರೆ ಬೆಳಕಿನ ಮಾಸ. ಕತ್ತಲನ್ನು ಓಡಿಸಲು ದೀಪ ಬೆಳಗಲಾಗುತ್ತದೆ. ಹಾಗೆಯೇ ನಮ್ಮ ಅಂತರಂಗದ ಕತ್ತಲನ್ನು ಓಡಿಸಲು ಜ್ಞಾನವೆಂಬ ಬೆಳಕಿನ ಅವಶ್ಯಕತೆ ಇದೆ. ಮಠಮಾನ್ಯಗಳು ಜನರಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ಮಾಡುತ್ತಿವೆ ಎಂದರು.
ಹಿಂದಿನ ಮಠಾಧೀಶರಾದ ಲಿಂಗೈಕ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಹಾ ತಪಸ್ವಿಗಳು, ಅಪಾರ ವಿದ್ವತ್ ಹೊಂದಿದವರು. ಅವರ ಕನಸಿನ ಮಠ ಇದಾಗಿದೆ. ಶ್ರಮವಹಿಸಿ ಈ ಮಠವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡಿದ್ದರು. ಪ್ರಸ್ತುತ ಸುತ್ತಲಿನ ಭಕ್ತರ, ದಾನಿಗಳ ಸಹಾಯದಿಂದ ಮಠ ಹೆಚ್ಚು ಅಭಿವೃದ್ಧಿ ಹೊಂದುತ್ತಿದೆ ಎಂದರು.
ಮಠದ ಬಳಿ ಸಣ್ಣ ಚೆಕ್ ಡ್ಯಾಂ ನಿರ್ಮಿಸಿ ಕಲ್ಯಾಣಿ ನಿರ್ಮಿಸುವ ಯೋಜನೆ ಹಾಕಿಕೊಂಡಿದ್ದು ಅನುದಾನ ದೊರೆತಿದೆ. ಈ ವರ್ಷದಿಂದ ಮಠದಲ್ಲಿ ಪ್ರತಿ ತಿಂಗಳು ಅಮಾವಾಸ್ಯೆ ಪೂಜೆ ನಡೆಸಲು ತೀರ್ಮಾನಿಸಿದ್ದು ಪೂಜೆ ನಡೆಸುವ ಭಕ್ತರು ಮುಂಚಿತವಾಗಿ ಮಠದಲ್ಲಿ ಹೆಸರನ್ನು ನೋಂದಾಯಿಸಿ ಪೂಜೆ ಸಲ್ಲಿಸಬಹುದು ಎಂದರು.
ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಜರುಗಿತು. ಚಂದನ್ ಶಾಸಿ, ದುಂಡಯ್ಯ, ಚೇತನ್ ಪೂಜಾ ವಿಧಾನಗಳನ್ನು ನಡೆಸಿಕೊಟ್ಟರು. ದೇವಸ್ಥಾನದ ಆವರಣದಲ್ಲಿ ಹೋಮ ಜರುಗಿತು. ಶ್ರೀ ದೇವಿ ಗುರುಕುಲದ ಆಲ್ದೂರು ಶಾಖೆಯವರು ಭಜನೆ ನಡೆಸಿಕೊಟ್ಟರು.