ನ್ಯೂಸ್

ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರು

ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಬಳಿಕವೂ ಜಿಲ್ಲೆಯಲ್ಲಿ ಅಕ್ಷರಶಃ ‘ನಾಡ ಕುಸ್ತಿ’ ಪರಂಪರೆ ವಿಜೃಂಭಿಸಿತು. ನಿರೀಕ್ಷೆಗೂ ಮೀರಿ ಸೇರಿದ್ದ ಪ್ರೇಕ್ಷಕರು ನೆಚ್ಚಿನ ಹುರಿಯಾಳುಗಳನ್ನು ಹುರಿದುಂಬಿಸುತ್ತಿದ್ದರು. ಮಟ್ಟಿ ಮೇಲೆ ಜಟ್ಟಿತನ ಮೆರೆದ ಪೈಲ್ವಾನರಿಗೆ ಶಿಳ್ಳೆ, ಚಪ್ಪಾಳೆಯ ಪ್ರೋತ್ಸಾಹ ನೀಡುತ್ತಿದ್ದರು!

ಇದು ತಾಲೂಕಿನ ಇಲವಾಲ-ಲಿಂಗದೇವರ ಕೊಪ್ಪಲು ಗ್ರಾಮದ ಶ್ರೀ ಜೋಡಿ ಮಾರಮ್ಮ ಜಾತ್ರಾ ಮಹೋತ್ಸವದ ಪ್ರಯುಕ್ತ ಮೈಸೂರು ಉತ್ತರ ರೋಟರಿ ಸಮುದಾಯ ದಳದಿಂದ ವತಿಯಿಂದ ಶನಿವಾರ ಇಲವಾಲದ ಸಂತೆಮಾಳದ ಆವರಣದಲ್ಲಿ ಆಯೋಜಿಸಿದ್ದ ರಾಷ್ಟಮಟ್ಟದ ಪುರುಷರ ಮತ್ತು ಮಹಿಳೆಯರ ಜಂಗಿ ಕುಸ್ತಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯ.

ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುತ್ತಿದ್ದಂತೆ ಕ್ರೀಡಾಂಗಣದ ಮೂಲೆ - ಮೂಲೆಯಲ್ಲೂ ನೆಚ್ಚಿನ ಪೈಲ್ವಾನರಿಗೆ ಜೈಕಾರಗಳು ಮೊಳಗಿದವು. ಬಗೆಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿಯ ಮೇಲೆ ಹುಬ್ಬೇರಿದ ಪೈಲ್ವಾನರು ವಿವಿಧ ಪಟ್ಟು ಪ್ರದರ್ಶಿಸಿ ಮದಗಜಗಳ ರೀತಿ ಸೆಣೆಸುತ್ತಿದ್ದಂತೆ ಕಿಕ್ಕಿರಿದು ಸೇರಿದ್ದ ಕುಸ್ತಿ ಪ್ರೇಮಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇನ್ನು ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್‌ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು.

ಸೊಲ್ಲಾಪುರ, ಬೆಳಗಾವಿ, ಶಿಕಾರಿಪುರ, ದಾವಣಗೆರೆ ಸೇರಿದಂತೆ ರಾಜ್ಯದ ನಾನಾ ಕಡೆಯಿಂದ ನೂರಕ್ಕೂ ಹೆಚ್ಚು ಪೈಲಾನರು ಆಗಮಿಸಿ ಅಖಾಡದಲ್ಲಿ ತೊಡೆ ತಟ್ಟಿದರು. ಹೀಗಾಗಿ 72 ಜೋಡಿಯ ಪ್ರತಿ ಪಂದ್ಯವೂ ರೋಮಾಂಚಕವಾಗಿತ್ತು. ಸ್ಟಾರ್ ಪೈಲ್ವಾನರ ಕುಸ್ತಿ ಪಂದ್ಯವನ್ನಂತೂ ಬಿಟ್ಟಕಣ್ಣು ಬಿಟ್ಟಂತೆ ನೋಡಿ ಮೈಮರೆತರು.

ಇದೇ ಸಂದರ್ಭದಲ್ಲಿ ಪೈ.ಗೋವಿಂದರಾಜ್, ಅಂತಾರಾಷ್ಟ್ರೀಯ ಖೋ ಖೋ ಪಟು ಚೈತ್ರಾ, ಸಮರ ಕಲೆಯ ಶಿವಣ್ಣ ಅವರನ್ನು ಸನ್ಮಾನಿಸಲಾಯಿತು.