ಸೊರಬ: ಬಡವರ ಹಾಗೂ ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಪಾಲಕರು ಮತ್ತು ಶಿಕ್ಷಕರು ನಿಗಾವಹಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ವಸತಿ ಶಾಲೆಗಳಲ್ಲಿ ಗ್ರಾಮೀಣ, ಬಡವರ ಮತ್ತು ಕೂಲಿ ಕಾರ್ಮಿಕರ ಮಕ್ಕಳು ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಲಿತಾಂಶ ಪಡೆದ್ದಾರೆ ಎಂದರು.
ಮುಂದಿನ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಪರೀಕ್ಷೆಗಳನ್ನು ಕೂಡ ಮೂರು ಹಂತದಲ್ಲಿ ನಡೆಸಲಾಗಿದೆ. ಪಿಯುಸಿ ಪೂರಕ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದು ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ. ಅಂಬೇಡ್ಕರ್ ವಸತಿ ಶಾಲೆಯಿಂದ ಮಕ್ಕಳಿಗೆ ಇನ್ನಷ್ಟು ಅನುಕೂಲವಾಗಲಿದೆ. ಶಿಕ್ಷಣದಿಂದಲೇ ದೇಶದ ಪ್ರಗತಿ ಎಂಬುದನ್ನು ಪಾಲಕರು ಅರಿಯಬೇಕು ಎಂದು ತಿಳಿಸಿದರು.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಜಿಲ್ಲಾ ಸಮನ್ವಯ ಅಧಿಕಾರಿ ಬಿ.ಕೆ.ಚಂದ್ರಪ್ಪ, ಕುಪ್ಪಗಡ್ಡೆ ಗ್ರಾಪಂ ಅಧ್ಯಕ್ಷ ನೂರ್‌ಅಹಮ್ಮದ್, ಉಪಾಧ್ಯಕ್ಷೆ ಮಮತಾ ರೇವಣಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಎಲ್.ಜಿ.ರಾಜಶೇಖರ, ಗ್ರಾಪಂ ಸದಸ್ಯರಾದ ಕೇಶವ್, ಕಮಲಾಕ್ಷಿ, ವಿದ್ಯಾ ಗುರುರಾಜ್, ಅಕ್ಷತಾ, ವಿನೋದಮ್ಮ, ಬಿಇಒ ಆರ್.ಪುಷ್ಪಾ ಪ್ರಾಚಾರ್ಯ ಆಂಜನೇಯ, ನಾಗರಾಜ್, ರಂಗನಾಥ, ತಾಪಂ ಮಾಜಿ ಸದಸ್ಯ ಪುರುಷೋತ್ತಮ, ಪ್ರಕಾಶ್, ಮಾಲತೇಶ್, ರಾಜೇಶ್, ಎಚ್.ಆನಂದಪ್ಪ ಇತರರಿದ್ದರು.