ಬೆಳಗಾವಿ: ವಿದ್ಯಾರ್ಥಿಗಳು ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನಗರದ ರವೀಂದ್ರನಾಥ ಟ್ಯಾಗೋರ್ ಪದವಿಪೂರ್ವ ಕಾಲೇಜ್‌ನ ಪ್ರಾಚಾರ್ಯ ಡಾ. ಸಿ.ಎನ್. ನಾಯ್ಕರ್ ಹೇಳಿದರು.
ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಸೋಮವಾರ ಆಯೋಜಿಸಿದ್ದ ಜಿಲ್ಲೆಯ ಶಾಲೆಗಳಿಗೆ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಸ್ಪರ್ಧಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ದೇಶದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು ಶೇ.6 ಜನರು ಮಾತ್ರ. ಈಗಿನ ತಾಂತ್ರಿಕ ಕ್ಷೇತ್ರದಲ್ಲಿ ವಿಜ್ಞಾನದ ಮೂಲ ಮಹತ್ವವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಮೂಲ ವಿಜ್ಞಾನದತ್ತ ಗಮನ ಕೊಡಬೇಕು.
ಜೀವನದಲ್ಲಿ ಏಕಾಗ್ರತೆ, ಅಧ್ಯಯನ ಕಲೆ ಬೆಳೆಸಿಕೊಳ್ಳಬೇಕು. ಸಚಿನ್ ತೆಂಡೂಲ್ಕರ್, ವಿರಾಟ ಕೊಹ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದಿರುವುದು ಅವರ ನಿಷ್ಠೆ, ಏಕಾಗ್ರತೆಯಿಂದ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ವಿಜ್ಞಾನ ಚಟುವಟಿಕೆಗಳಿಗಳತ್ತ ಆಸಕ್ತಿ ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಮಾತನಾಡಿ, ಸುರೇಶ ಅಂಗಡಿ ಶಿಕ್ಷಣ ಪ್ರತಿಷ್ಠಾನವು ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಕ್ಲಬ್ ಪ್ರಾರಂಭಿಸಲಿದ್ದು, ಇದು ವಿಜ್ಞಾನ
ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಸೌಲಭ್ಯ ಪಡೆದು ದೇಶದ ಅಭಿವೃದ್ಧಿಗೆ ದುಡಿಯಬೇಕು ಎಂದರು.
ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ, ಪ್ರಾಚಾರ್ಯರಾದ ಪ್ರೊ. ಎಚ್.ಎಸ್. ಪಾಟೀಲ, ಪ್ರೊ.ಸಂಗೀತಾ ದೇಸಾಯಿ, ಪ್ರೊ. ಕೆ.ಎ. ಜೇರೆ ಸೇರಿ ಎಲ್ಲ ವಿಭಾಗಗಳ ಮುಖ್ಯಸ್ಥರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇದ್ದರು. ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರೊ.ಸದಾನಂದ ದೊಡಮನಿ ಸ್ವಾಗತಿಸಿದರು. ಪ್ರೊ.ಸುಷ್ಮಾ ನಿರೂಪಿಸಿದರು.
ಪ್ರೊ.ಗುರುರಾಜ ವಂದಿಸಿದರು.