ಬಾಳೆಹೊನ್ನೂರು: ವಿದ್ಯಾರ್ಥಿಗಳಲ್ಲಿ ಹಬ್ಬಗಳ ಆಚರಣೆಯ ಅರಿವು ಮೂಡಿಸುವುದು ಪಾಲಕರು, ಶಿಕ್ಷಕರ ಕರ್ತವ್ಯ ಎಂದು ಸಂಸ್ಕೃತಿ ಶಾಲೆ ಪ್ರಾಚಾರ್ಯೆ ರಜನಿ ದೇವಯ್ಯ ಹೇಳಿದರು.
ರೇಣುಕನಗರದ ಸಂಸ್ಕೃತಿ ವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಮಕರ ಸಂಕ್ರಾಂತಿ ಹಬ್ಬದಲ್ಲಿ ಮಾತನಾಡಿ, ಮಕರ ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿದ್ದು, ರೈತರಿಗೆ ಸುಗ್ಗಿಯ ಹಬ್ಬ. ರೈತರು ಸಲು ಪಡೆದು ಪೂಜಿಸಿ ಸಂಭ್ರಮಿಸಿ ರಾಸುಗಳನ್ನು ಕಿಚ್ಚು ಹಾಯಿಸುವುದಾಗಿದೆ. ಈ ಹಬ್ಬದಂದು ಹೊಸ ಬೆಳೆಯ ತಿನಿಸು ಹಾಗೂ ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನಾಡು ಎಂಬ ನುಡಿಯಿದೆ ಎಂದರು.
ಮಕ್ಕಳಲ್ಲಿ ವಿಶಿಷ್ಟವಾಗಿ ಹಬ್ಬವನ್ನು ಆಚರಿಸುವ ಮೂಲಕ ಅವರ ಮನಸ್ಸಿನಲ್ಲಿ ಹಬ್ಬಗಳ ಮಹತ್ವ ಸದಾ ಉಳಿಯುವಂತೆ ಮಾಡಲಾಗುತ್ತಿದೆ ಎಂದರು. ಮಕರ ಸಂಕ್ರಾಂತಿ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳು ಗಾಳಿಪಟ ತಯಾರಿಸಿ ಹಾರಿಸಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ಎಳ್ಳುಬೆಲ್ಲ ಹಂಚಲಾಯಿತು. ಶಿಕ್ಷಕಿಯರಾದ ಅಶ್ವಿನಿ, ದೀಪಿಕಾ, ರೇಷ್ಮಾ, ಜಾಫ್ರಿನ್ ಮತ್ತಿತರರಿದ್ದರು.