ಕೆ.ಆರ್.ನಗರದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳ ವೇಷಭೂಷಣ ಎಲ್ಲರ ಗಮನ ಸೆಳೆಯಿತು. 
ನ್ಯೂಸ್

ಮಕ್ಕಳಿಗೆ ಧಾರ್ಮಿಕ ಆಚರಣೆ, ಸಂಸ್ಕೃತಿಯ ಮಾಹಿತಿ ನೀಡಿ

ವಾಸವಿ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕಿ ಕೆ.ಬಿ.ವೀಣಾ ಸಲಹೆ


ಕೆ.ಆರ್.ನಗರ: ತತ್ವಜ್ಞಾನಿಯಾಗುವುದರ ಜತೆಗೆ ಶ್ರೀ ಕೃಷ್ಣ ದಾರ್ಶನಿಕರೂ ಆಗಿದ್ದರು ಎಂದು ವಾಸವಿ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕಿ ಕೆ.ಬಿ.ವೀಣಾ ಹೇಳಿದರು.


ಪಟ್ಟಣದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಷ್ಣುವಿನ ದಶಾವತಾರದಲ್ಲಿ ಶ್ರೀಕೃಷ್ಣ 8ನೇ ಅವತಾರ ಪುರುಷನಾಗಿ ಜನಿಸಿದ. ಮಹಾಭಾರತದ ಮೂಲಕ ಜಗತ್ತಿಗೆ ಜೀವನದ ಕೌಶಲ ಮತ್ತು ಯುದ್ಧ ತಂತ್ರಗಳನ್ನು ತಿಳಿಸಿದ ಮಹಾನ್ ರಾಜ ನೀತಿತಜ್ಞ ಎಂದರು.


ಕೃಷ್ಣನ ಬಾಲ್ಯದ ದಿನಗಳು ಸಾಹಸಮಯವಾಗಿದ್ದು, ಅವುಗಳ ಜ್ಞಾನ ಮತ್ತು ತಿಳಿವಳಿಕೆ ಇಂದಿನ ಮಕ್ಕಳಿಗೆ ಅಗತ್ಯವಾಗಿದೆ. ಪ್ರಸ್ತುತ ಧಾರ್ಮಿಕ ಆಚರಣೆ, ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.


ಇದೇ ವೇಳೆ ಶಾಲಾ ಮಕ್ಕಳು ಕೃಷ್ಣ, ರಾಧೆ, ರುಕ್ಮಿಣಿ ವೇಷ ತೊಟ್ಟು ಎಲ್ಲರ ಗಮನ ಸೆಳೆದರು. ಶಿಕ್ಷಕರಾದ ಸಿ.ಎಂ.ಶೈಲಜಾ, ರಂಗಸ್ವಾಮಿ, ರಶ್ಮಿ, ಚಿತ್ರಾ, ರಾಜೇಶ್ವರಿ, ಆಶಾ, ರೇಣುಕಾ, ಎಚ್.ಎಸ್.ಮಧುರ, ರೂಪಾ, ಪದ್ಮಾ, ಟಿ.ಡಿ.ಕಾಂತರಾಜ್ ಇತರರಿದ್ದರು.