ಕೋಲಾರ: ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು 12 ರಿಂದ 14 ವರ್ಷದ ಪ್ರತಿಯೊಂದು ಮಗುವಿಗೂ ಕಡ್ಡಾಯವಾಗಿ ಕರೊನಾ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ನಗರದ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ 12 ರಿಂದ 14 ವರ್ಷದ ಮಕ್ಕಳಿಗೆ 4ನೇ ಹಂತದ ಕರೊನಾ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರೊನಾ ತಡೆಗೆ ಸರ್ಕಾರ ಉಚಿತವಾಗಿ ಕಾರ್ಬ್ವ್ಯಾಕ್ಸ್ ಲಸಿಕೆ ಒದಗಿಸಿದೆ ಎಂದು ತಿಳಿಸಿದರು.
ಜಿಲ್ಲಾ ಅಂಧತ್ವಾಧಿಕಾರಿ ಡಾ. ನಾರಾಯಣಸ್ವಾಮಿ ಮಾತನಾಡಿ, ಕರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಕಾರ್ಯ ಮಾಡಿದ್ದು, ಜಿಲ್ಲೆಯಲ್ಲಿ 61,232 ಮಕ್ಕಳಿಗೆ ಲಸಿಕೆ ನೀಡಲಿದ್ದೇವೆ. ದೇಶಾದ್ಯಾಂತ 12 ರಿಂದ 14 ವರ್ಷದ ಪ್ರತಿ ಮಗುವಿಗೂ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ದೇಶದಲ್ಲಿ ಕರೊನಾ ಪ್ರಾರಂಭವಾದಾಗ ಇಡೀ ಪ್ರಪಂಚವೇ ಭಯಭೀತವಾಗಿತ್ತು. ಈ ಕಾಯಿಲೆಗೆ ಸಾಕಷ್ಟು ಮಂದಿ ತುತ್ತಾಗಿ ಮೃತಪಟ್ಟರು. ಇದನ್ನು ನಿಯಂತ್ರಿಸಲು ಹಂತ ಹಂತವಾಗಿ ಲಸಿಕೆ ನೀಡಲು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೊದಲ ಡೋಸ್ ಲಸಿಕೆ ಪಡೆದವರು 11,99,899 ಮಂದಿ, ಇದು ಶೇ.104 ರಷ್ಟು ಸಾಧನೆಯಾಗಿದ್ದು, 2ನೇ ಡೋಸ್ ಅನ್ನು 11,54,686 ಮಂದಿ ಪಡೆದಿದ್ದು, ಶೇ 100 ಪ್ರಗತಿ ಸಾಧಿಸಲಾಗಿದೆ. ಜ.3ರಂದು 15-&18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ಅಭಿಯಾನದಲ್ಲಿ ಜಿಲ್ಲೆಯಲ್ಲಿ 74,720 ಡೋಸ್ ಲಸಿಕೆ ನೀಡಿದ್ದು, ಶೇ 90 ಹಾಗೂ 2ನೇ ಡೋಸ್ 52,551 ಮಂದಿ ಪಡೆದಿದ್ದು, ಶೇ.64 ಪ್ರಗತಿ ಸಾಧಿಸಲಾಗಿದೆ. ಮುಂದಿನ ದಿನಗಳಲ್ಲಿ ಶೇ.100 ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಶಾಲೆ ಮತ್ತು ಕಾಲೇಜಿನಿಂದ ಹೊರಗುಳಿದ ಮಕ್ಕಳು, ಅಲೆಮಾರಿ ಸಮುದಾಯದ ಮಕ್ಕಳ ಪಾಲಕರಿಗೆ ಆಶಾ ಕಾರ್ಯಕರ್ತೆಯರಿಂದ ಮಾಹಿತಿ ಪಡೆದು ಲಸಿಕೆ ಹಾಕಿಸಿಕೊಳ್ಳವಂತೆ ಮನವಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಜಿಲ್ಲಾ ಶಸ್ತ್ರಚಿಕಿತ್ಸಾಧಿಕಾರಿ ಡಾ. ವಿಜಯ್ ಕುಮಾರ್, ಜಿಲ್ಲಾ ಮಕ್ಕಳ ತಜ್ಞ ಡಾ.ಶ್ರೀನಾಥ್, ತಾಲೂಕು ವೈದ್ಯಾಧಿಕಾರಿ ಡಾ.ರಮ್ಯಾದಿಪಿಕಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರೇಮಾ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಕೋಟ್ರೇಶ್ ಇದ್ದರು.