ಚಿಟಗುಪ್ಪದಲ್ಲಿ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಶ್ರೀ ಗುರುಲಿಂಗ ಶಿವಾಚಾರ್ಯ, ಶ್ರೀ ಮರುಳಾರಾಧ್ಯ ಶಿವಾಚಾರ್ಯ, ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ್, ಡಾ.ಶೈಲೇಂದ್ರ ಬೆಲ್ದಾಳೆ, ತಾಪಂ ಇಒ ಲಕ್ಷ್ಮೀ ಬಿರಾದಾರ, ಬಿಇಒ ವೆಂಕಟೇಶ ಗೂಡಾಳ, ಪ್ರಮುಖರಾದ ರವಿಂದ್ರರೆಡ್ಡಿ, ರಾಜಶೇಖರ ಉಪ್ಪಿನ, ಅಶೋಕ ಮಹೇಂದ್ರಕರ, ಪ್ರಮೀಳಾ ರೆಡ್ಡಿ, ಶಾಂತಕುಮಾರ ಪಾಟೀಲ್ ಇತರರಿದ್ದರು. 
ನ್ಯೂಸ್

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ

ಚಿಟಗುಪ್ಪ: ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ಪಟ್ಟಣದ ಶ್ರೀ ಮಡಿವಾಳೇಶ್ವರ ಗವಿ ಕಲ್ಯಾಣ ಮಂಟಪದಲ್ಲಿ ಶಿಕ್ಷಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ೬೪ನೇ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ವೃತ್ತಿ ಅತ್ಯಂತ ಗೌರವದಿಂದ ಕೂಡಿದೆ. ಡಾ.ರಾಧಾಕೃಷ್ಣನ್ ತತ್ವ ಆದರ್ಶಗಳನ್ನು ಪಾಲಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಶಿಕ್ಷಕರಿಗೆ ಮನವಿ ಮಾಡಿದರು.

ಕ್ಷೇತ್ರದಲ್ಲಿ ಶಿಕ್ಷಣ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತಿದ್ದು, ಅದರಂತೆ ನಾನಾ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ನೂತನ ತಾಲೂಕು ಕೇಂದ್ರವಾಗಿರುವ ಇಲ್ಲಿ ಪ್ರಜಾಸೌಧ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಅದರಂತೆ ಕ್ರೀಡಾಂಗಣ, ತಾಲೂಕು ಮಟ್ಟದ ಸರ್ಕಾರಿ ಆಸ್ಪತ್ರೆ, ತಾಪಂ ಕಟ್ಟಡ ನಿರ್ಮಾಣ ಸೇರಿ ಇತರೆ ಇಲಾಖೆಯ ಕಟ್ಟಡ ನಿರ್ಮಾಣಕ್ಕೂ ಸರ್ಕಾರದ ಮೇಲೆ ಒತ್ತಡ ಹೇರಿ ಪ್ರಯತ್ನಿಸಲಾಗುತ್ತಿದೆ. ಶಿಕ್ಷಕರ ಸಮಸ್ಯೆಗಳಿಗೂ ಸದಾ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.

ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ವಿಕಸಿತ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದೆ. ೨೦೪೭ರಲ್ಲಿ ಭಾರತ ಸ್ವಾತಂತ್ಯುತ್ಸವದ ಶತಮಾನೋತ್ಸವ ಆಚರಿಸಲಿದೆ. ಆ ಹೊತ್ತಿಗೆ ವಿಕಸಿತ ಭಾರತ, ವಿಶ್ವ ಗುರು ಭಾರತ ನಿರ್ಮಾಣದ ಸಂಕಲ್ಪ ತೊಟ್ಟು ಪ್ರಧಾನಿ ನರೇಂದ್ರ ಮೋದಿ ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತ ಕನಸು ನನಸಾಗಬೇಕಾದರೆ ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ಹಿರೇಮಠ ಶ್ರೀ ಗುರುಲಿಂಗ ಶಿವಾಚಾರ್ಯರು, ಶ್ರೀ ಮರುಳಾರಾಧ್ಯ ಶಿವಾಚಾರ್ಯರು ಆಶೀರ್ವಚನ ನೀಡಿದರು. ಪ್ರಾಧ್ಯಾಪಕ ಶಾಂತಕುಮಾರ ಪಾಟೀಲ್ ಉಪನ್ಯಾಸ ನೀಡಿದರು. ಬಿಇಒ ವೆಂಕಟೇಶ ಗೂಡಾಳ ಪ್ರಾಸ್ತಾವಿಕ ಮಾತನಾಡಿದರು.

ತಾಪಂ ಇಒ ಲಕ್ಷ್ಮೀ ಬಿರಾದಾರ, ಬಿಆರ್‌ಸಿ ಅಧಿಕಾರಿ ಪ್ರೀತಮ್ ಸಿಂಗ್, ಬಿಸಿಊಟ ಅಧಿಕಾರಿ ಕರುಣದೇವಿ ಸಿಂಧೆ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಾಜಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜಶೇಖರ ಉಪ್ಪಿನ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರರೆಡ್ಡಿ , ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಿಬೂಬ್ ಪಟೇಲ್, ತಾಲೂಕು ಅಧ್ಯಕ್ಷ ಅಶೋಕಕುಮಾರ ಮಹೇಂದ್ರಕರ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಪ್ರಮೀಳಾ ರೆಡ್ಡಿ, ವಿವಿಧ ಸಂಘಗಳ ಪ್ರಮುಖರಾದ ಪಂಡಿತ ಕಲ್ಯಾಣ, ಕಾಶೇಪ್ಪ ಅಮ್ಮಗೊಂಡ ಇತರರಿದ್ದರು. ಸೇವಾ ನಿವೃತ್ತ ಶಿಕ್ಷಕರನ್ನು, ತಾಲೂಕಿನಲ್ಲಿ ಪ್ರತಿಶತ ಫಲಿತಾಂಶ ತಂದಿದ್ದ ಮತ್ತು ಅತ್ಯುತ್ತಮ ಶಾಲಾ ಮುಖ್ಯಗುರುಗಳನ್ನು ಹಾಗೂ ಅಕಾಲಿಕ ನಿಧನವಾದ ಶಿಕ್ಷಕರ ಕುಟುಂಬದ ಸದಸ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು. ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಮಡಿವಾಳೇಶ್ವರ ಗವಿವರೆಗೆ ಶಿಕ್ಷಕರಿಂದ ಭವ್ಯ ಮೆರವಣಿಗೆ ಜರುಗಿತು.

ಸರ್ಕಾರ ಶಾಲೆಗಳಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಸೌಲಭ್ಯ ಒದಗಿಸುತ್ತಿದ್ದು, ಶಿಕ್ಷಕರು, ಇಲಾಖೆಯ ಅಧಿಕಾರಿಗಳು ಮನೆ ಮನೆಗೆ ತೆರಳಿ ಪಾಲಕರ ಮನವಲಿಸಿ ಶಾಲೆ ಕಡೆ ಮಕ್ಕಳು ಬರುವಂತೆ ಪ್ರಾಮಾಣಿಕ ಪ್ರಯತ್ನ ಮಾಡಿ.

|ಡಾ.ಶೈಲೇಂದ್ರ ಬೇಲ್ದಾಳೆ

ಶಾಸಕ ಬೀದರ್ ದಕ್ಷಿಣ ಕ್ಷೇತ