ನ್ಯೂಸ್

ಮಕ್ಕಳಿಗೆ ಅಂಬೇಡ್ಕರ್ ತತ್ವಾದರ್ಶ ಅನುಸರಿಸುವಂತೆ ತಿಳಿಸಿಕೊಡಿ

ರಾವಂದೂರು: ಮಕ್ಕಳಿಗೆ ಅಂಬೇಡ್ಕರ್ ತತ್ವಾದರ್ಶಗಳನ್ನು ಅನುಸರಿಸುವಂತೆ ತಿಳಿಸಿಕೊಡಿ ಎಂದು ಸಿಆರ್‌ಪಿ ಗಣೇಶ್‌ಕುಮಾರ್ ಸಲಹೆ ನೀಡಿದರು.


ಪಿರಿಯಾಪಟ್ಟಣ ತಾಲೂಕು ರಾವಂದೂರು ಗ್ರಾಮದ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಭಾನುವಾರ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಇತಿಹಾಸದಲ್ಲಿ ಅಂಬೇಡ್ಕರ್ ಅವರ ಭೀಮ ಕೋರೆಗಾಂವ್ ವಿಜಯೋತ್ಸವದ ವಿಷಯಗಳನ್ನು ಅಳವಡಿಸದೆ ಇರುವುದು ಶೋಚನೀಯ ಸಂಗತಿಯಾಗಿದೆ. ಮರಾಠರ ಪೇಶ್ವೆಗಳ ಆಡಳಿತದ ಸಮಯದಲ್ಲಿ ದಲಿತರಿಗೆ ಯಾವುದೇ ರೀತಿಯ ಸ್ವಾತಂತ್ರವಿರಲಿಲ್ಲ, ಯಾವ ಮಟ್ಟಿಗೆ ದಲಿತರ ಮೇಲೆ ಶೋಷಣೆ ನಡೆಯುತ್ತಿತ್ತೆಂದರೆ ದಲಿತರ ನೆರಳು ಇತರ ಜನಾಂಗದ ಮೇಲೆ ಬೀಳಬಾರದೆಂಬ ಕಾರಣಕ್ಕೆ ಕೇವಲ ಮಧ್ಯಾಹ್ನದ ಸಮಯದಲ್ಲಿ ಮಾತ್ರ ಅವರು ಹೊರಗೆ ಹೋಗಬೇಕಿತ್ತು. ಅಂತಹ ಒಂದು ಹೀನಾಯ ಸ್ಥಿತಿ ಇದ್ದ ಸಂದರ್ಭದಲ್ಲಿ ಅಂದರೆ 1818ರಲ್ಲಿ ಬ್ರಿಟಿಷರು ಕೋರೆಗಾಂವ್ ಎಂಬ ಪ್ರದೇಶದಲ್ಲಿ ಯುದ್ಧ ಸಾರಿದರು. ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ವಾಭಿಮಾನದ ಸಂಕೇತವಾಗಿ 28000 ಜನ ಸೈನಿಕರನ್ನು ಸೋಲಿಸಿ ದಲಿತ ಸೇನಾಪಡೆ ವಿಜಯ ಸಾಧಿಸಿದ ದಿನವೇ ಕೋರೆಗಾಂವ್ ವಿಜಯೋತ್ಸವ ದಿನ. ಇಲ್ಲಿ ವಿಜಯದ ಸಂಕೇತವಾಗಿ ವಿಜಯಸ್ಥಂಭ ಸ್ಥಾಪಿಸಿದ್ದು, ಈ ಸ್ಥಳದಲ್ಲಿ 48 ಸೈನಿಕರು ಪ್ರಾಣತ್ಯಾಗ ಮಾಡಿದ್ದು, ಆ ವಿಜಯ ಸ್ಥಂಭದಲ್ಲಿ ಅವರ ಹೆಸರು ಉಲ್ಲೇಖವಿದೆ. ಮಹಾರಾಷ್ಟ್ರದಲ್ಲಿ ಇಂದಿಗೂ ಹೊಸ ವರ್ಷವನ್ನು ಈ ಪ್ರದೇಶದಲ್ಲಿಯೇ ಆಚರಿಸುತ್ತಾರೆ ಎಂದು ತಿಳಿಸಿದರು.


ಉಪನ್ಯಾಸಕ ಪುಟ್ಟಮಾದಯ್ಯ, ತಾಲೂಕು ಛಲವಾದಿ ಮಹಾಸಂಘದ ಅಧ್ಯಕ್ಷ ತಮ್ಮಣ್ಣಯ್ಯ, ತಾಪಂ ಮಾಜಿ ಅಧ್ಯಕ್ಷ ಜವರಪ್ಪ ಮಾತನಾಡಿದರು.


ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಕಾಂತರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಆಯತನಹಳ್ಳಿ, ಮುಖಂಡರಾದ ಸುಭಾಷ್, ಸಣ್ಣಕಾಳಯ್ಯ, ಶಿವದೇವಪ್ಪ, ಶಿವಣ್ಣ, ಬಸವರಾಜು, ಮೂರ್ತಿ, ಕೇಶವಮೂರ್ತಿ, ಶ್ರೀನಿವಾಸ್, ಕುಮಾರ್, ಭಾಸ್ಕರ್, ಚಲುವರಾಯ್, ದೊಡ್ಡಸ್ವಾಮಿ, ಮಹದೇವ, ರಮಣಯ್ಯ, ರಘು, ಸಂತೋಷ್, ಸಣ್ಣಯ್ಯ, ಯೋಗೇಶ್, ಮಾದಯ್ಯ, ಬಸಮ್ಮ ಮತ್ತಿತರರು ಹಾಜರಿದ್ದರು.