ಎನ್.ಆರ್.ಪುರದಲ್ಲಿ ಸಂಗೀತ ಸುಧೆ ಹಾಗೂ ಪ್ರಖ್ಯಾತ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮವನ್ನು ಕಸಾಪ ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಉದ್ಘಾಟಿಸಿದರು. ಎಚ್.ಎಸ್.ಪೂರ್ಣೇಶ್, ಕಣಿವೆ ವಿನಯ್, ನಂಜುಂಡಪ್ಪ, ಮಂಜುನಾಥ್ ಇದ್ದರು. 
ನ್ಯೂಸ್

ಮಕ್ಕಳಲ್ಲಿ ಸಾಹಿತ್ಯ ಅಭಿರುಚಿ, ಪುಸ್ತಕಪ್ರೇಮ ಬೆಳೆಸಿ

ಎನ್.ಆರ್.ಪುರ: ಮನೆಗಳಲ್ಲಿ ನಡೆಯುವ ಶುಭ ಕಾರ್ಯಗಳಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ನಡೆಸಿದರೆ ಮನೆಗೆ ಬಂದ ಬಂಧುಗಳಲ್ಲೂ ಸಾಹಿತ್ಯ ಅಭಿರುಚಿ, ಪುಸ್ತಕ ಪ್ರೇಮ ಬೆಳೆಯಲಿದೆ ಎಂದು ಕಣಿವೆಯ ನಾಗಚಂದ್ರ ಪ್ರತಿಷ್ಠಾನದ ಮುಖ್ಯಸ್ಥ ಕಣಿವೆ ವಿನಯ್ ತಿಳಿಸಿದರು.

ಪಟ್ಟಣದ ಭಾಗ್ಯರಾಮ ಲೇಔಟ್‌ನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಕಸಬಾ ಹೋಬಳಿ ಕಾರ್ಯದರ್ಶಿ ನಾಗರಾಜ್ ಅಪ್ಪಾಜಿ ಅವರ ಮನೆಯಂಗಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಏರ್ಪಡಿಸಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಡಿ ಸಂಗೀತ ಸುಧೆ ಹಾಗೂ ಪ್ರಖ್ಯಾತ ಲೇಖಕರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣೇಶ್ ಕನ್ನಡ ಸಾಹಿತ್ಯ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶಕ್ಕೂ ತಲುಪಿಸಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ಭಾಷಿಗರು ಕನ್ನಡಿಗರ ಮೇಲೆ ದೌರ್ಜನ್ಯ ನಡೆಸುತ್ತಿದ್ದು ಅಲ್ಲಿನ ರಾಜಕಾರಣಿಗಳಿಗೆ ಕನ್ನಡ ಭಾಷೆಗಿಂತ ಮರಾಠಿಗರ ವೋಟು ಮುಖ್ಯವಾಗಿದೆ. ಕನ್ನಡ ಸಾವಿರಾರು ವರ್ಷ ಕಳೆದರೂ ನಶಿಸುವ ಭಾಷೆಯಲ್ಲ ಎಂದು ಅಭಿಪ್ರಾಯಪಟ್ಟರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗರೂ ಪುಸ್ತಕ ಓದಬೇಕು. ನಾಗರಾಜ್ ಅಪ್ಪಾಜಿ ಅವರು ಕನ್ನಡ ಭಾಷೆ, ಪುಸ್ತಕಗಳ ಬಗ್ಗೆ ಪ್ರೇಮ ಬೆಳೆಸಿಕೊಂಡವರು. ಮಕ್ಕಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಬಂಧುಗಳು, ಮಿತ್ರರಿಗೆ ಉಡುಗೊರೆ ನೀಡುವಾಗ ಕನ್ನಡ ಪುಸ್ತಕಗಳನ್ನು ನೀಡಬೇಕು ಎಂದರು.

ಕಸಾಪ ಕಸಬಾ ಹೋಬಳಿ ಕಾರ್ಯದರ್ಶಿ ಆರ್.ನಾಗರಾಜ್ ಉದ್ಘಾಟಿಸಿದರು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್, ಅಶೋಕ್ ಇದ್ದರು. ಗಾಯಕರಾದ ಸಿಂಸೆಯ ವಿಶ್ರೇಯ, ಕೈಮರ ಜಯರಾಜ್ ಹಾಗೂ ಗಾಯಕರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.