ನ್ಯೂಸ್

ಮಕ್ಕಳಲ್ಲಿ ಕೌತುಕ ಹೆಚ್ಚಿಸಿದ ವಿಜ್ಞಾನ ಕಲಿಕೋಪಕರಣ

ನಗರದ ವಸಂತ ಮಹಲ್‌ನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಕಲಿಕೋಪಕರಣ ಮೇಳ ಮಕ್ಕಳ ಗಮನ ಸೆಳೆದಿದ್ದಲ್ಲದೆ, ಅವರಲ್ಲಿ ವಿಜ್ಞಾನದ ಕೌತುಕವನ್ನು ಹೆಚ್ಚಿಸಿತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಮಂತ್ರ ಫಾರ್ ಜೇಂಜ್ ಸಹಯೋಗದಲ್ಲಿ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಆಯೋಜಿಸಿದ್ದ ವಿಜ್ಞಾನ ಮೇಳದಲ್ಲಿ ನೀರಿನ ಶುದ್ಧೀಕರಣ ಘಟಕದ ಮಾದರಿ, ಹಸಿರು ವಸತಿ ಸಮುಚ್ಛಯ, ಮಾದರಿ ಗ್ರಾಮ, ಸೌರ ವಿದ್ಯುತ್ ಬಳಕೆ ಮತ್ತು ಪ್ರಯೋಜನದ ಮಾದರಿ, ರಾಕೆಟ್, ರಕ್ತ ಪರಿಚಲನೆ ಮಾದರಿ, ಶ್ವಾಸಕೋಶ ಸೇರಿದಂತೆ ಹತ್ತಾರು ಮಾದರಿಗಳು ವಿದ್ಯಾರ್ಥಿಗಳಿಲ್ಲಿ ವೈಜ್ಞಾನಿಕ ಮನೋಭಾವನ್ನು ಮೂಡಿಸಿದವು.

ಇದಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಜ್ಞಾನಿ ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಪಠ್ಯ ಬೋಧನೆಯ ಜತೆಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಒಗ್ಗಿಕೊಳ್ಳಬೇಕು ಮತ್ತು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ವೈದ್ಯರು ಹಾಗೂ ಇಂಜಿನಿಯರ್ ಮಾಡುವ ತವಕದಲ್ಲಿದ್ದಾರೆ. ಪರಿಣಾಮ ಆ ಶಿಕ್ಷಣವು ಬಹಳಷ್ಟು ದುಬಾರಿಯಾಗಿದೆ. ಸರ್ಕಾರಿ ಸೀಟು ಸಿಕ್ಕರೂ ಭರಿಸಲಾಗದಂತಹ ಸ್ಥಿತಿ ಇದೆ. ಇನ್ನೊಂದೆಡೆ, ವಿಜ್ಞಾನ ಓದುವವರ ಸಂಖ್ಯೆ ಕಡಿಮೆಯಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಈಗ ಬಿಎಸ್ಸಿಗೆ ಸೇರುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಎಲ್ಲದಕ್ಕೂ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಶಿಕ್ಷಣವೇ ಪರಿಹಾರವಲ್ಲ. ವಿಜ್ಞಾನವೂ ಬೇಕು. ಅದನ್ನು ಓದಿದವರಿಗೂ ಬಹಳಷ್ಟು ಅವಕಾಶಗಳಿವೆ. ವಿಜ್ಞಾನಿಗಳಾಗಿ ಸಾಧಿಸಿದವರು ಬಹಳಷ್ಟು ಮಂದಿ ಇದ್ದಾರೆ. ಮಾರಕ ಕಾಯಿಲೆಗಳಿಂದ ರಕ್ಷಣೆ ಪಡೆಯಲು ಔಷಧ ಕಂಡುಹಿಡಿಯುವುದು ಸಾಧ್ಯವಾಗಿರುವುದು ಆವಿಷ್ಕಾರದಿಂದ ಎನ್ನುವುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಕ ವಿದ್ಯಾಲಯದ ಪ್ರಾಂಶುಪಾಲೆ ಎಚ್.ಎನ್.ಗೀತಾಂಬಾ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಸಿ.ಆರ್.ನಾಗರಾಜಯ್ಯ, ನೋಡಲ್ ಅಧಿಕಾರಿ ಪುಷ್ಪಲತಾ, ಡಿವೈಎಸ್ಪಿಗಳಾದ ಶೋಭಾ, ಪುಷ್ಪಾ, ಬಿಆರ್‌ಸಿಗಳಾದ ನಾಗೇಶ್, ಶ್ರೀಕಂಠಸ್ವಾಮಿ, ಉಪನ್ಯಾಸಕ ಧನಂಜಯ, ರಾಜ್ಯ ಶಿಕ್ಷಕರ ಸಂಘದ ನಿರ್ದೇಶಕ ಮಹದೇವು ಇದ್ದರು.