ನ್ಯೂಸ್

ಮಕ್ಕಳನ್ನು ಪ್ರಜ್ಞಾವಂತ ಪ್ರಜೆಯನ್ನಾಗಿಸಬೇಕು: ಬಿ.ಕೆ. ಗಂಗಾಧರ್

ಹಾಸನ: ಮಗುವಿಗೆ ಚಿಕ್ಕಂದಿನಿಂದಲೇ ಸಂಸ್ಕಾರ, ಕಲೆ, ಧರ್ಮ, ದೇಶ ಭಾಷೆಯೆಡೆಗೆ ಗೌರವ ಬೆಳೆಸುವಂತಹ ಮೌಲ್ಯಗಳನ್ನು ಕಲಿಸುವ ಮೂಲಕ ಅವರನ್ನು ಪ್ರಜ್ಞಾವಂತ ಪ್ರಜೆಯನ್ನಾಗಿಸಬೇಕು ಎಂದು ಟೈಮ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಟೈಮ್ಸ್ ಪಿ.ಯು. ಕಾಲೇಜಿನ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳನ್ನು ಶಾಲಾ - ಕಾಲೇಜು ಹಂತದಲ್ಲೇ ತಿದ್ದಬೇಕಾದ ಅವಶ್ಯಕತೆ ಇದೆ. ಇಂದಿನ ಯುವ ಸಮಾಜ ಎತ್ತ ಸಾಗುತ್ತಿದೆ ಎಂದು ನೋಡಿದರೆ ಒಮ್ಮೆ ಭಯವಾಗುತ್ತದೆ. ಮೊಬೈಲ್ ಒಂದಿದ್ದರೆ ಇನ್ನೇನು ಬೇಡ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಬಂದು ನಿಂತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಕ್ಕಲು ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಪೋಷಕರು ತಮ್ಮ ಮಕ್ಕಳಿಗೆ ದ್ವಿಚಕ್ರ ವಾಹನವನ್ನು ಕೊಡಿಸುವುದರಿಂದ, ಕೊಡುವುದರಿಂದ ಸಾಕಷ್ಟು ಅನಾಹುತಗಳು ಜರುಗುತ್ತಿವೆ. ಯುವಕರು ಮೋಜು-ಮಸ್ತಿಗಾಗಿ ಬೈಕ್ ಸ್ಟಂಟ್ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಒಂದು ಉತ್ತಮ ಸಮಾಜ ನಿರ್ಮಾಣ ಆಗಬೇಕಾದರೆ ಉತ್ತಮ ಯುವ ಸಮುದಾಯದ ಅವಶ್ಯಕತೆ ಇದೆ. ಹೀಗಾಗಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲಿ ಅವರಿಗೆ ಒಳ್ಳೆಯ ಮಾರ್ಗದರ್ಶನ ಮಾಡಬೇಕು. ಈ ದಿಸೆಯಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಗುರುತರವಾದ ಹೊಣೆಗಾರಿಕೆಯಿದೆ. ಟೈಮ್ಸ್ ಶಿಕ್ಷಕಣ ಸಂಸ್ಥೆ ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ತನ್ನ ಹೆಜ್ಜೆಗುರುತು ಮೂಡಿಸುತ್ತಿದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ಕರೆ ನೀಡಿದರು.

ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಮಕ್ಕಳಿಗೆ ವಿಷಯಗಳನ್ನು ತಿಳಿಯಪಡಿಸಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ದೇಶೀಯ ಶೈಲಿಯಲ್ಲಿ ನಮ್ಮ ಜನಪದ ಸೊಗಡಿನೊಂದಿಗೆ ಹೇಳಿಕೊಟ್ಟಲ್ಲಿ ನೈಜ ಶಿಕ್ಷಣವನ್ನು ಮಕ್ಕಳಿಗೆ ನೀಡಿ ಅವರನ್ನು ಸ್ಪರ್ಧಾ ಪ್ರಪಂಚಕ್ಕೆ ಕಳುಹಿಸಬಹುದು. ಶಿಕ್ಷಕರು ಹೇಳಿಕೊಡುವ ವಿಷಯವನ್ನು ಪೋಷಕರು ಮನೆಗಳಲ್ಲಿ ತಪ್ಪದೆ ಹೇಳಿಕೊಡುವ ಮೂಲಕ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಮಾಡಬಹುದು. ಇದಲ್ಲದೆ ಶಾಲೆಯಲ್ಲಿ ಮಾನವೀಯ ಗುಣಗಳ ಬಗ್ಗೆ ತಿಳಿಸಿಕೊಡುವ ಯತ್ನ ನಡೆಸಲಾಗುತ್ತಿದ್ದು, ಇದರಿಂದ ಸಮಾಜದಲ್ಲಿ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತಿನ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಟೈಮ್ಸ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸುರೇಂದ್ರ ಹಾಗೂ ಇತರರು ಹಾಜರಿದ್ದರು.