ನ್ಯೂಸ್

ಮಕ್ಕಳ ಬಲಿ ಪಡೆದ ಕುಂಟೆ, ಎರಡು ಶವಗಳು ಪತ್ತೆ: ಮತ್ತಿಬ್ಬರಿಗಾಗಿ ಶೋಧ


ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಸಿಕ್ಕಿರುವ ರಜೆಯ ಮಜಾದ ನಡುವೆ ಬಾಗೇಪಲ್ಲಿ ತಾಲೂಕಿನ ಕೊತ್ತಕುಂಟೆಯಲ್ಲಿ ಈಜಾಡಲು ಹೋದ ನಾಲ್ವರು ಬಾಲಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು ತೀವ್ರ ಶೋಧದಿಂದ ಎರಡು ಮೃತದೇಹಗಳು ಪತ್ತೆಯಾಗಿವೆ.


ಬಾಗೇಪಲ್ಲಿ ತಾಲೂಕಿನ ಊದವಾರಪಲ್ಲಿಯ ವರುಣ್ (13), ಸಂತೋಷ್ (12), ಮಹೇಶ್ (13) ಮತ್ತು ಆಂಧ್ರ ಮೂಲದ ಬದ್ರಿನಾಥ್ (13) ಸಮೀಪದ ಕೊತ್ತಕುಂಟೆಯಲ್ಲಿ ಈಜಾಡಲು ಬುಧವಾರ ಬೆಳಿಗ್ಗೆ ಹೋಗಿದ್ದರು. ಇದರ ನಡುವೆ ಮಧ್ಯಾಹ್ನ ಮೃತದೇಹವೊಂದು ತೇಲುತ್ತಿರುವುದರ ಬಗ್ಗೆ ಕುರಿ ಕಾಯುತ್ತಿದ್ದ ಸ್ಥಳೀಯರು, ತಕ್ಷಣ ಗ್ರಾಮಸ್ಥರ ನೆರವಿನ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಶ್ವಾನದಳ, ಅಗ್ನಿಶಾಮಕ ದಳ ಮತ್ತು ಪೊಲೀಸ್ ಪಡೆ ನುರಿತ ಈಜುಪಟುಗಳ ನೆರವಿನೊಂದಿಗೆ ಶೋಧ ಕಾರ್ಯ ನಡೆಸಿದ್ದು ಇದೇ ವೇಳೆ ತೇಲುತ್ತಿದ್ದ ಮೃತದೇಹ ವರುಣ್ ದ್ದು ಎಂಬುದು ತಿಳಿದು ಬಂದಿದೆ. ಬಳಿಕ ಹುಡುಕಾಟದಿಂದ ಬದ್ರಿನಾಥ್ ಮೃತದೇಹ ಸಿಕ್ಕಿದೆ. ಕಳೆದ 4 ಗಂಟೆಯಿಂದಲೂ ಶೋಧ ಕಾರ್ಯ ಕೈಗೊಳ್ಳುತ್ತಿದ್ದು ಮೃತ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಕೊತ್ತಕುಂಟೆಯಲ್ಲಿ ಹೆಚ್ಚಿಗೆ ನೀರು ಸಂಗ್ರಹವಾಗಿತ್ತು. ಆದರೆ, ಆಳದ ಬಗ್ಗೆ ಅಂದಾಜಿಸದ ಮಕ್ಕಳು ಈಜಾಡಲು ನೀರಿಗಿಳಿದಿದ್ದಾರೆ. ಕುಂಟೆಯ ದಂಡೆಯಲ್ಲಿ ನಾಲ್ವರ ಬಟ್ಟೆಗಳು ಇವೆ. ಈಗಾಗಲೇ ಇಬ್ಬರ ಮೃತದೇಹ ಸಿಕ್ಕಿದ್ದು ಉಳಿದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆಯೇ? ಇಲ್ಲವೇ ಇಬ್ಬರು ಭಯ ಬಿದ್ದು ಗೆಳೆಯರ ಸಾವಿನಿಂದ ಓಡಿ ಹೋಗಿದ್ದಾರೆಯೇ? ಎಂಬ ಅನುಮಾನ ಕಾಡುತ್ತಿದೆ.