ಮಕ್ಕಳ ಪ್ರತಿಭೆಯನ್ನು ಪಾಲಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಹೇಳಿದರು.
ನಗರದ ಕಲಾಮಂದಿರದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ನೌಕರರ ವೃತ್ತಿಪರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ 29ನೇ ವಾರ್ಷಿಕ ಪ್ರತಿಭಾ ಪುರಸ್ಕಾರ, ನಿವೃತ್ತಿ ಹಾಗೂ ಬಡ್ತಿ ಹೊಂದಿದ ಅಧಿಕಾರಿಗಳು ಮತ್ತು ನೌಕರರು, ಸಾಧಕರು ಹಾಗೂ ಸಮಾಜಸೇವಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಮೂಲಕ ಉಪ್ಪಾರ ಸಮಾಜದ ನೌಕರರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ. ಜತೆಗೆ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಂಘ ಸದಾ ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ. ಉಪ್ಪಾರ ಜನಾಂಗದ ಐತಿಹಾಸಿಕ ಮಹತ್ವವನ್ನು ತೆರೆದಿಡುವ ಮತ್ತು ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಆಯೋಜಿಸುವ ಮೂಲಕ ಸಂಘವು ಸಮಾಜದ ಜತೆಗೆ ಸದಾ ಹೆಗಲು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹೊಸದುರ್ಗ ಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮಳವಳ್ಳಿ ತಾಲೂಕಿನ ಅಯ್ಯನಸರಗೂರು ಮಠದ ಶ್ರೀ ಮಹದೇವ ಸ್ವಾಮೀಜಿ, ಶ್ರೀ ಭಗೀರಥ ಶೈಕ್ಷಣಿಕ ಚಾರಿಟಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಪಿ.ಶಿವಶಂಕರ್, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಗೌರವಾಧ್ಯಕ್ಷ ಹನುಮಂತಶೆಟ್ಟಿ, ಕಾರ್ಯಾಧ್ಯಕ್ಷ ಪಿ.ಎಸ್.ವಿಷಕಂಠಯ್ಯ ಇತರರಿದ್ದರು.
ಇದೇ ವೇಳೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್.ರವೀಂದ್ರನಾಥ್ ಅವರಿಗೆ ಶ್ರೀ ಭಗೀರಥ ವೈದ್ಯ ವಿಭೂಷಣ ಪ್ರತಿಭಾರತ್ನ ಪ್ರಶಸ್ತಿ ಹಾಗೂ ಚಾಮರಾಜನಗರ ಜಿಲ್ಲೆಯ ದೊಡ್ಡಮೋಳೆ ಗ್ರಾಮದ ತಂಬೂರಿ ಶೈಲಿಯ ನೀಲಗಾರರಾದ ದೊಡ್ಡಗವಿಬಸಪ್ಪ ಅವರಿಗೆ ಶ್ರೀ ಭಗೀರಥ ಕಲಾ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.