ನ್ಯೂಸ್

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಿಕಾ ಹಬ್ಬ ಸಹಾಯಕ

ಸಿದ್ದಾಪುರ: ಚೆನ್ನಯ್ಯನ ಕೋಟೆ ಸರ್ಕಾರಿ ಶಾಲೆಯ ಆವರಣದಲ್ಲಿ ಕ್ಲಸ್ಟರ್ ಮಟ್ಟದ ‘ಕಲಿಕಾ ಹಬ್ಬ’ ವಿವಿಧ ಕಲಿಕೋತ್ಸವದ ಮೂಲಕ ಸಂಭ್ರಮ ಸಡಗರದಿಂದ ಸೋಮವಾರ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಮಾತನಾಡಿ, ಮಕ್ಕಳ ಕಲಿಕೆಗೆ ಆಸಕ್ತಿ ಹೆಚ್ಚಿಸಲು ಸರ್ಕಾರ ವಿನೂತನ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನದ ಕಲಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಮಕ್ಕಳ ಪ್ರತಿಭೆ ಅನಾವರಣಗೊಳಿಸಲು ಸಾಧ್ಯವಾಗಲಿದೆ ಎಂದರು.

ವಿರಾಜಪೇಟೆ ಕ್ಷೇತ್ರದ 14 ಕ್ಲಸ್ಟರ್ ವ್ಯಾಪ್ತಿಯಲ್ಲಿ ಕಲಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ಕಲಿಕಾ ಹಬ್ಬದ ಮೂಲಕ ತಮ್ಮ ಪ್ರತಿಭೆಯನ್ನ ಅನಾವರಣಗೊಳಿಸಿದ್ದಾರೆ. ಶಾಲೆಗಳಲ್ಲಿ ಅಚ್ಚುಕಟ್ಟದ ಎಲ್ಲ ವ್ಯವಸ್ಥೆಗಳಿದ್ದು, ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದರು.

ಕ್ಷೇತ್ರ ಸಂಪನ್ಮೂಲ ಅಧಿಕಾರಿ ರುಕ್ಮಿಣಿ ಮಾತನಾಡಿ, ಸರ್ಕಾರದ ವಿನೂತನ ಕಾರ್ಯಕ್ರಮದಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ಕಲಿಕೆ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರತಿಭಾನ್ವಿತರಾಗಿ ಗುರುತಿಸಿಕೊಂಡು ಸಾಧನೆಯೊಂದಿಗೆ ಮಾದರಿಯಾಗುತ್ತಿದ್ದಾರೆ ಎಂದರು.

ಶಾಲಾ ಮುಖ್ಯ ಶಿಕ್ಷಕಿ ಎಚ್.ಎ. ರಾಜಮ್ಮ ಮಾತನಾಡಿ, ಕ್ಲಸ್ಟರ್ ವ್ಯಾಪ್ತಿಯ ಘಟದಳ್ಳ, ಬಾಡಗ ಮಾಲ್ದಾರೆ, ಚೆನ್ನಂಗಿ, ಹುಂಡಿ, ಗುಡ್ಲೂರು, ಚನ್ನಯ್ಯನಕೋಟೆ ಶಾಲೆಗಳ ವಿದ್ಯಾರ್ಥಿಗಳು ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಅನಾವರಣಗೊಳಿಸುವುದರ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಶಿಕ್ಷಕರು ಮುಂದಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವಕ ವಾಟೇರಿರಾ ಸುರೇಶ್ ಸೋಮಯ್ಯ, ಸಿಆರ್‌ಪಿಗಳಾದ ಕೇಶವಮೂರ್ತಿ, ಕರುಂಬಯ್ಯ, ಪ್ರವೀಣ್, ವಿದ್ಯಾ, ಕೆ.ಕೆ. ಸುಷ್ಮಾ, ಬಿಐಆರ್‌ಟಿ ವಿಠ್ಠಲ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಶಂಕರ್, ಮಾಲ್ದಾರೆ ಶಾಲೆಯ ಮುಖ್ಯ ಶಿಕ್ಷಕ ವಿಜಯ್ ಕುಮಾರ್, ಪಂಚಾಯಿತಿಯ ಸದಸ್ಯರಾದ ವಿಜು, ನಾರಾಯಣ್, ಪ್ರಮುಖರಾದ ಶಶಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

ಕಲಿಕಾ ಹಬ್ಬದ ಸಂಭ್ರಮಕ್ಕಾಗಿ ಶಾಲಾ ಆವರಣ ತಳಿರು ತೋರಣ ಅಲಂಕಾರಿಕ ವಸ್ತುಗಳಿಂದ ಕಂಗೊಳಿಸುತಿತ್ತು. ಕಳಸ, ಹುಲಿ ವೇಷ, ಕಂಸಾಳೆ, ವಾಲಗ ತಂಡದೊಂದಿಗೆ ಮಕ್ಕಳು ವಿವಿಧ ವೇಷಭೂಷಣಗಳನ್ನು ತೊಟ್ಟು ಶಾಲಾ ಆವರಣದಲ್ಲಿ ನಡೆದ ಮೆರವಣಿಗೆಯಲ್ಲಿ ಪಾಲ್ಗೊಂಡು ಅತಿಥಿಗಳನ್ನು ಸ್ವಾಗತಿಸಿದರು.

ಪ್ರತ್ಯೇಕ ಕೊಠಡಿಗಳಲ್ಲಿ ಮಕ್ಕಳಿಗೆ ರಸಪ್ರಶ್ನೆ , ಜ್ಞಾಪಕ ಶಕ್ತಿ, ಕಲಿಕೆ, ಗಟ್ಟಿ ಓದು, ಸಂತೋಷದಾಯಕ ಗಣಿತ, ಕೈಬರಹ, ಕಥೆ ಹೇಳುವುದು ಸೇರಿದಂತೆ ಹಲವು ಸ್ಪರ್ಧೆ ಕಾರ್ಯಕ್ರಮಗಳು ಗಮನ ಸೆಳೆಯಿತು. ನಂತರ ವಿಜೇತರರಿಗೆ ಬಹುಮಾನ ವಿತರಿಸಲಾಯಿತು.