ಕಂಪಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟವನ್ನು ಪಾರಿವಾಳಗಳನ್ನು ಹಾರಿಬಿಡುವ ಮೂಲಕ ಗಣ್ಯರು ಉದ್ಘಾಟಿಸಿದರು. ಸದಾಶಿವ, ರಘುಪತಿ, ಶೀಲಾ ಮಂಜು ಇತರರು ಇದ್ದರು. 
ನ್ಯೂಸ್

ಮಕ್ಕಳ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ

ಕಂಪಲಾಪುರ: ಮಕ್ಕಳ ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಲಿದೆ ಎಂದು ಸರ್ಕಾರಿ ಪ್ರೌಢಶಾಲೆ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸದಾಶಿವ ತಿಳಿಸಿದರು.

ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಆಟದಲ್ಲಿ ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ, ಎರಡನ್ನೂ ಸಮನಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.

ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ರಘುಪತಿ ಮಾತನಾಡಿ, ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡಾ ಮನೋಭಾವ ಮೈಗೂಡಿಸಿಕೊಳ್ಳಬೇಕು. ಈ ಮೂಲಕ ದೈಹಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಗ್ರಾಪಂ ಅಧ್ಯಕ್ಷೆ ಶೀಲಾ ಮಂಜು ಕ್ರೀಡಾಜ್ಯೋತಿ ಸ್ವೀಕರಿಸಿದರು. ಕ್ರೀಡಾಕೂಟದಲ್ಲಿ 10 ಪ್ರೌಢಶಾಲೆಗಳು ಭಾಗವಹಿಸಿದ್ದವು. ಪಥಸಂಚಲನದಲ್ಲಿ ಮಾಕೋಡು ಶಾಲೆ ಪ್ರಥಮ, ಅತ್ತಿಗೋಡು ಶಾಲೆ ದ್ವಿತೀಯ, ಕಂಪಲಾಪುರ ಶಾಲೆ ತೃತೀಯ ಸ್ಥಾನ ಪಡೆಯಿತು.

ತಾಲೂಕು ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗಶೆಟ್ಟಿ, ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಸುರೇಶ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪರಮಶಿವಯ್ಯ, ಶಾಲೆ ಮುಖ್ಯ ಶಿಕ್ಷಕ ಮಹದೇವಯ್ಯ, ರಾಜಯ್ಯ, ಮುಖಂಡ ಪ್ರಕಾಶ್ ಗೌಡ, ಗ್ರಾಪಂ ಸದಸ್ಯ ಮಂಜು, ಕುಮಾರ್, ಸುರೇಶ್, ಕೆ.ಪಿ.ನಿಂಗರಾಜು, ವಿಶುಕುಮಾರ್, ಶಿಕ್ಷಕರಾದ ಜಗದೀಶ್, ಶಿವರಾಜ್, ಯಶ್ವಂತ್, ಎಸ್‌ಡಿಎಂಸಿ ಸದಸ್ಯರಾದ ಜಯರಾಂ, ರಾಣಿ, ಶಹಜಾನ್, ಸತೀಶ್ ಇತರರು ಇದ್ದರು.