ಎನ್.ಆರ್.ಪುರ: ಸುಮಾರು 110 ವರ್ಷಗಳ ಇತಿಹಾಸವಿರುವ ಗ್ರಂಥಾಲಯ ಕಟ್ಟಡ ಇದೀಗ ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಯಾವ ಸಂದರ್ಭದಲ್ಲಿ ಬೇಕಾದರೂ ಬೀಳುವ ಸ್ಥಿತಿಯಲ್ಲಿದ್ದು ಇದಕ್ಕೆ ದಾನಿಗಳ ಕುಟುಂಬ ಬೇಸರ ವ್ಯಕ್ತಪಡಿಸಿದೆ. ಜಾಗವನ್ನು ಉದ್ದೇಶಿತ ಕಾರ್ಯಕ್ಕೆ ಬಳಸದಿದ್ದರೆ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆಯೂ ಇದೆ.
ಗ್ರಂಥಾಲಯವನ್ನು ಮೈಸೂರು ಕಂಠೀರವ ನರಸಿಂಹರಾಜ ಒಡೆಯರ್ ಆಗಮಿಸಿ ಬೆಳ್ಳಿಯ ಕೀ ತೆಗೆದು ಉದ್ಘಾಟಿಸಿದ್ದರು. ಇಂದಿಗೂ 1915ರ ಗ್ರಂಥಾಲಯ ಉದ್ಘಾಟನಾ ಆಹ್ವಾನ ಪತ್ರಿಕೆ ಹಾಗೂ ಬೆಳ್ಳಿ ಕೀ ಜಾಗ ದಾನ ನೀಡಿದ ದಾನಿಯ ಮೊಮ್ಮಗ ಎನ್.ಎಂ.ಮರುಳಪ್ಪ ಅವರ ಬಳಿ ಲಭ್ಯವಿದೆೆ. ನರಸಿಂಹರಾಜಪುರ ಎಂದು ನಾಮಾಂಕಿತವಾಗಲು ಕಾರಣವಾದ ಗ್ರಂಥಾಲಯ ಇದೀಗ ಈ ಕಟ್ಟಡ ಹಾಳು ಕೊಂಪೆಯಂತಾಗಿದೆ.
ಊರಿನ ಅಂದಿನ ಗಣ್ಯ ವ್ಯಕ್ತಿಯಾಗಿದ್ದ ಶಾಂತಪ್ಪಶೆಟ್ಟರು ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರಿಗೆ ಆತ್ಮೀಯರಾಗಿದ್ದರಿಂದ ಆ ಕಾಲದಲ್ಲಿ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವಕ್ಕೆ ಶಾಂತಪ್ಪಶೆಟ್ಟರು ವಿಶೇಷ ಆಹ್ವಾನಿತರಾಗಿದ್ದರು ಎಂದು ಅವರ ಮೊಮ್ಮಗ ಎನ್.ಎಂ.ಮರುಳಪ್ಪ ಮಾಹಿತಿ ನೀಡಿದ್ದಾರೆ. ಶಾಂತಪ್ಪಶೆಟ್ಟರು ಅಂದಿನ ಕಾಲದಲ್ಲಿಯೇ ಸಾರ್ವಜನಿಕರಿಗೆ ಅನುಕೂಲವಾಗಲೆಂದು ರೀಡಿಂಗ್ ರೂಮ್ (ಗ್ರಂಥಾಲಯ) ಕಟ್ಟಿಸಿ ಅದರ ಉದ್ಘಾಟನೆಗೆ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರನ್ನು ಆಹ್ವಾನಿಸಿ 1915ರಂದು ಉದ್ಘಾಟನೆಗೊಳಿಸಿದರು. ಅದರ ಜ್ಞಾಪಕಾರ್ಥವಾಗಿ ಯಡೆಹಳ್ಳಿಯನ್ನು ನರಸಿಂಹರಾಜಪುರ ಎಂದು ಮರು ನಾಮಕರಣ ಮಾಡಲಾಯಿತೆಂದು, ಮುಂದೆ ಅದು ಕಿರಿದಾಗಿ ಎನ್.ಆರ್.ಪುರವೆಂದು ಬದಲಾಯಿತು. ಈ ಕುರಿತು ದಾಖಲೆಗಳೂ ಲಭ್ಯವಿದೆ ಎಂದು ಎನ್.ಎಂ.ಮರುಳಪ್ಪ ತಿಳಿಸಿದ್ದಾರೆ.