ನಂಜನಗೂಡು ತಾಲೂಕಿನ ಕುರಿಹುಂಡಿ ಗ್ರಾಮದಲ್ಲಿ ಮಕ್ಕಳ ಕಳ್ಳರು ಎಂದು ಶಂಕಿಸಿ ಗ್ರಾಮಸ್ಥರು ಇಬ್ಬರನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. 
ನ್ಯೂಸ್

ಮಕ್ಕಳ ಕಳ್ಳರೆಂದು ಶಂಕಿಸಿ ಇಬ್ಬರು ಪೊಲೀಸರ ವಶಕ್ಕೆ

ನಂಜನಗೂಡು: ತಾಲೂಕಿನ ಹುಲ್ಲಹಳ್ಳಿ ಸಮೀಪದ ಕುರಿಹುಂಡಿ ಗ್ರಾಮದಲ್ಲಿ ರಸ್ತೆ ಬದಿಯಲ್ಲಿ ಚಿಂದಿ ಆಯುತ್ತಿದ್ದ ಇಬ್ಬರು ಅಪರಿಚಿತರನ್ನು ಮಕ್ಕಳನ್ನು ಹಿಡಿಯುವ ಕಳ್ಳರು ಎಂದು ಶಂಕಿಸಿ ಗ್ರಾಮಸ್ಥರು ಅಟ್ಟಾಡಿಸಿಕೊಂಡು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.


ಗ್ರಾಮದ ಮುಖ್ಯರಸ್ತೆಯಲ್ಲಿ ಮಂಗಳವಾರ ಇಬ್ಬರು ಅಪರಿಚಿತರು ಚೀಲಗಳನ್ನು ಕೈಯಲ್ಲಿ ಹಿಡಿದು ಅಲೆದಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅನುಮಾನಗೊಂಡು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಅನ್ಯಭಾಷಿಕರಾದ ಚಿಂದಿ ಆಯುತ್ತಿದ್ದವರು ಅಸ್ಪಷ್ಟ ಕನ್ನಡದಲ್ಲಿ ಸಮಜಾಯಿಷಿ ನೀಡಿ ಹೋಗಲು ಮುಂದಾದರಾದರೂ ಸ್ಥಳೀಯರು ಅವಕಾಶ ಕೊಟ್ಟಿಲ್ಲ. ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಅಪರಿಚಿತರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.


ಈ ಕುರಿತು ಮಾಹಿತಿ ನೀಡಿದ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ್, ಕುರಿಹುಂಡಿಯಲ್ಲಿ ಅಪರಿಚಿತರಿಬ್ಬರನ್ನು ಗ್ರಾಮಸ್ಥರು ಮಕ್ಕಳ ಕಳ್ಳರು ಎಂಬ ಶಂಕೆ ವ್ಯಕ್ತಪಡಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಪ್ರಾಥಮಿಕ ವಿಚಾರಣೆ ವೇಳೆ ಇಬ್ಬರೂ ಕಳೆದ ಒಂದೂವರೆ ವರ್ಷದಿಂದ ಹುಲ್ಲಹಳ್ಳಿಯಲ್ಲಿ ವಾಸ್ತವ್ಯವಿದ್ದು, ಹಳೇ ಸರಕು ಸಾಮಗ್ರಿ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಈ ಇಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಈ ಬಗ್ಗೆ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿಸಿದರು.