- ರಾವಂದೂರು: ಮಕ್ಕಳಲ್ಲಿ ಅಪೌಷ್ಟಿಕತೆ ಹೋಗಲಾಡಿಸಿ ಆರೋಗ್ಯವಂತರನ್ನಾಗಿ ಮಾಡಲು ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಯೋಜನೆ ಅತ್ಯಂತ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೊಟ್ಟೆ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ 1ರಿಂದ 8ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ ವಿತರಣೆ ಮಾಡುತ್ತಿದ್ದು, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡಿದಂತಾಗಿತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರವು ಈ ವಿದ್ಯಾರ್ಥಿಗಳಿಗೂ ಮೊಟ್ಟೆ ವಿತರಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ. ಮಕ್ಕಳ ದೈಹಿಕ ಶಕ್ತಿ ಹಾಗೂ ಆರೋಗ್ಯಕ್ಕೆ ಇದು ಉತ್ತಮ ಎಂದರು.
ಅಕ್ಷರದಾಸೋಹ ಸಹಾಯಕ ನಿರ್ದೇಶಕ ಎಂ.ಸಿ.ಪ್ರಶಾಂತ್ ಮಾತನಾಡಿ, ಆಹಾರ ಮತ್ತು ಅಕ್ಷರ ಮಕ್ಕಳಿಗೆ ಎರಡು ಕಣ್ಣುಗಳಿದ್ದಂತೆ. ಆಹಾರವು ಮಕ್ಕಳಲ್ಲಿ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿದರೆ, ಅಕ್ಷರವು ಮಕ್ಕಳಲ್ಲಿ ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಉತ್ತಮ ಆಹಾರ ದೊರೆತರೆ ಅವರಲ್ಲಿ ಅಪೌಷ್ಟಿಕತೆ ದೂರವಾಗಿ ಜ್ಞಾನಾರ್ಜನೆಯಲ್ಲಿ ತೊಡಗಲು ಸಹಕಾರಿಯಾಗುತ್ತದೆ. ಇಂದಿನಿಂದ ಒಬ್ಬ ವಿದ್ಯಾರ್ಥಿಗೆ ಈ ವರ್ಷದ ಕೊನೆಯವರೆಗೆ ಒಟ್ಟು 80 ಮೊಟ್ಟೆಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದರು.