‘ಮಕರ ಸಂಕ್ರಾಂತಿ’ಯನ್ನು ಮಂಗಳವಾರ ಸಡಗರ, ಸಂಭ್ರಮದೊಂದಿಗೆ ಆಚರಿಸಲು ಮೈಸೂರಿಗರು ತಯಾರಿ ಮಾಡಿಕೊಳ್ಳುತ್ತಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಸೋಮವಾರ ಜನರು ಉತ್ಸಾಹದಿಂದ ಪೂಜಾ ಹಾಗೂ ಅಗತ್ಯ ಸಾಮಗ್ರಿ ಖರೀದಿಸಿದರು.
ದೇವರಾಜ ಮಾರುಕಟ್ಟೆ, ಚಿಕ್ಕಗಡಿಯಾರ, ವಾಣಿವಿಲಾಸ ಮಾರುಕಟ್ಟೆ, ನಂಜುಮಳಿಗೆ, ಎಂ.ಜಿ.ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ರಾಶಿ ರಾಶಿ ಕಬ್ಬಿನ ಜಲ್ಲೆಗಳನ್ನು ರೈತರು ಹಾಗೂ ವರ್ತಕರು ತಂದು ಮಾರಾಟ ಮಾಡಿದರು. ಜನರು ಉತ್ಸಾಹದಿಂದ ಕಬ್ಬು, ಎಳ್ಳು, ಬೆಲ್ಲ ಹಾಗೂ ಪೂಜಾ ಸಾಮಗ್ರಿ ಖರೀದಿಸುತ್ತಿದ್ದ ದೃಶ್ಯ ಕಂಡುಬಂತು.
ದಕ್ಷಿಣದಿಂದ ಉತ್ತರಾಯಣದ ಕಡೆಗೆ ಸೂರ್ಯ ತನ್ನ ಚಲನೆ ಬದಲು ಮಾಡುವುದರಿಂದ ಈ ಕಾಲವನ್ನು ಸಂಕ್ರಾಂತಿಯನ್ನಾಗಿ ಆಚರಣೆ ಮಾಡಲಾಗುತ್ತದೆ. ಅಲ್ಲದೆ, ಈ ಸಮಯದಲ್ಲಿ ಸೂರ್ಯದೇವ ತನ್ನ ಮಗ ಶನಿಯನ್ನು ಭೇಟಿ ಮಾಡುತ್ತಾನೆ ಎನ್ನುವ ನಂಬಿಕೆ ಇದೆ. ಮಕರ ಸಂಕ್ರಾಂತಿ ದೇಶದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದ್ದು, ಈ ಹಬ್ಬವನ್ನು ವಿವಿಧೆಡೆ ಹಲವು ರೀತಿಯಲ್ಲಿ ಆಚರಿಸಲಾಗುತ್ತದೆ.
ಮೈಸೂರು ಭಾಗದಲ್ಲಿ ಜನರು ಹಬ್ಬದ ದಿನದಂದು ಸೂರ್ಯ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮನೆ ಮುಂಭಾಗ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ತುಂಬುತ್ತಾರೆ. ಮನೆಗಳನ್ನು ಅಲಂಕಾರ ಮಾಡಿ ಎಳ್ಳು-ಬೆಲ್ಲ ಹಂಚಲಾಗುತ್ತದೆ.