ನ್ಯೂಸ್

ಮಕ್ಕಳ ವಿಕಾಸಕ್ಕೆ ಕ್ರೀಡೆ ಸಹಕಾರಿ

ತಿ.ನರಸೀಪುರ: ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡಾಕೂಟಗಳು ಸಹಕಾರಿಯಾಗಲಿದ್ದು, ಕಲಿಕೆಯ ಹಂತದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಾಸಗೊಳ್ಳಲು ಪಾಠದಷ್ಟೇ ಕ್ರೀಡೆಯ ಅಗತ್ಯವಿದೆ ಎಂದು ಸೋಸಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಹೇಶ್ ಹೇಳಿದರು.

ತಾಲೂಕಿನ ವ್ಯಾಸರಾಜಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸೋಸಲೆ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣ ಬೆಳೆಯುವ ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳು ಓದಿನೊಂದಿಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಮರಿಸ್ವಾಮಿ ಮಾತನಾಡಿ, ಹೋಬಳಿ ಮಟ್ಟದ ಕ್ರೀಡಾಕೂಟ ಕ್ರೀಡೆಯಲ್ಲಿ ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ಮೆಟ್ಟಿಲಾಗಬೇಕು. ಅಧಿಕ ಜನ ಸಂಪನ್ಮೂಲ ಹೊಂದಿರುವ ಭಾರತ ಒಲಿಂಪಿಕ್ಸ್ ನಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದೆ. ಭಾರತೀಯ ಕ್ರೀಡಾಪಟುಗಳು ಹಲವು ಕ್ರೀಡೆಗಳಲ್ಲಿ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅವರೆಲ್ಲರೂ ಮಕ್ಕಳಿಗೆ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.

ಕ್ರೀಡಾ ಕೂಟದ ಕುರಿತು ಗ್ರಾ.ಪಂ ಸದಸ್ಯ ದ್ವಾರಿ ಪುಟ್ಟಸ್ವಾಮಿ ಮಾತನಾಡಿದರು. ಸದಸ್ಯ ಸುಂದರ್, ಕೇಬಲ್ ಮಲ್ಲೇಶ, ಮುಖ್ಯ ಶಿಕ್ಷಕ ನಾಗೇಂದ್ರ, ಎಸ್.ಎಸ್.ಜಗನ್ನಾಥ್, ಎಸ್‌ಡಿಎಂಸಿ ಅಧ್ಯಕ್ಷ ಶಂಕರ್, ಮಂಜುನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಎಸ್.ನಾಗೇಶ, ಶಿಕ್ಷಕ ಸುಬ್ರಮಣ್ಯ, ಗಜೇಂದ್ರ, ಸುಬ್ಬಣ್ಣ, ಚಾಮುಂಡೇಶ್ವರಿ, ಶ್ರೀಕಂಠಯ್ಯ, ಪುಟ್ಟರಾಜು, ಸೋಮಶೇಖರ್, ಎ.ಮಹದೇವಯ್ಯ, ಮಹಮ್ಮದ್ ಇಕ್ಭಾಲ್ ಇತರರು ಇದ್ದರು.