ಮಂಗಳೂರು: ಕಳೆದ ಬಾರಿಯಂತೆ ಈ ಬಾರಿಯೂ ‘ಮಂಗಳೂರು ದಸರಾ’ ಕೋವಿಡ್ ಮಾರ್ಗಸೂಚಿಗಳೊಂದಿಗೆ ಅ.7ರಿಂದ ಅ.16ರವರೆಗೆ ಸರಳವಾಗಿ ನಡೆಯಲಿದೆ. ಶೋಭಾಯಾತ್ರೆ ರದ್ದು ಮಾಡಲಾಗಿದ್ದು, ಶಾರದಾ ವಿಸರ್ಜನೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆವರಣದ ಒಳಗೇ ನೆರವೇರಲಿದೆ.
ದೇವಳದ ನವೀಕರಣ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿಯವರ ಮಾರ್ಗದರ್ಶದಂತೆ, ‘ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಮಹೋತ್ಸವ ಆಯೋಜಿಸಲಾಗುತ್ತಿದೆ. ಕಳೆದ ಬಾರಿಯಂತೆ ಪೊಟ್ಟಣದಲ್ಲಿ ಪ್ರಸಾದ ರೂಪದಲ್ಲಿ ಅನ್ನ ವಿತರಣೆ ಇರುತ್ತದೆ ಎಂದು ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಸುದ್ದಿಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.
ಈ ಬಾರಿ ದಸರಾ ಉತ್ಸವ ಆಚರಣೆ ಕುರಿತು ಜಿಲ್ಲಾಧಿಕಾರಿಯವರನ್ನು ಭೇಟಿಯಾದ ಸಂದರ್ಭ, ಸರಳವಾಗಿ ನಡೆಸುವಂತೆ ಅವರಿಂದ ಸೂಚನೆ ಸಿಕ್ಕಿದೆ. ಅದರಂತೆ, 7ರಂದು ಮಹಾನವಮಿ ಉತ್ಸವ ಆರಂಭದೊಂದಿಗೆ ಕ್ಷೇತ್ರದಲ್ಲಿ ಬೆಳಗ್ಗೆ 9 ಗಂಟೆಗೆ ಗುರುಪ್ರಾರ್ಥನೆ, 11.30ಕ್ಕೆ ಕಲಶ ಪ್ರತಿಷ್ಠಾಪನೆ ಹಾಗೂ 11.40ಕ್ಕೆ ನವದುರ್ಗೆಯರ ಮತ್ತು ಶಾರದಾ ಪ್ರತಿಷ್ಠಾಪನೆ ನಡೆಯಲಿದೆ. ನಿತ್ಯ ವಿಶೇಷ ಪೂಜೆಗಳು ನೆರವೇರಲಿದೆ. 15ರಂದು ಮಹಾಪೂಜೆ ನಡೆದು ರಾತ್ರಿ 8ರಿಂದ ಕ್ಷೇತ್ರದೊಳಗೆ ಸರಳ ಮೆರವಣಿಗೆಯೊಂದಿಗೆ ಶಾರದಾ ವಿಸರ್ಜನೆ ನಡೆಸಲಾಗುವುದು ಎಂದು ವಿವರಿಸಿದರು.
ಕ್ಷೇತ್ರಾಡಳಿತ ಮಂಡಳಿ ಉಪಾಧ್ಯಕ್ಷೆ ಉರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಸದಸ್ಯರಾದ ರವಿಶಂಕರ ಮಿಜಾರು, ಮಹೇಶ್ಚಂದ್ರ, ಎಂ.ಶೇಖರ್ ಪೂಜಾರಿ, ಸಂತೋಷ್ ಕುಮಾರ್, ಜಗದೀಪ್ ಡಿ.ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಸದಸ್ಯರಾದ ರಾಧಾಕೃಷ್ಣ, ಜತಿನ್ ಅತ್ತಾವರ, ಲೀಲಾಕ್ಷ ಕರ್ಕೇರ, ಚಂದನ್‌ದಾಸ್, ಗೌರವಿ ಪಿ.ಕೆ., ಕಿಶೋರ್ ದಂಡಕೇರಿ ಮೊದಲಾದವರು ಉಪಸ್ಥಿತರಿದ್ದರು.
8 ದಿನಗಳ ಕಾಲ ಕೋವಿಡ್ ಲಸಿಕೆ: ದಸರಾ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ವರ್ಚುವಲ್ ಆಗಿ ನಡೆಯಲಿದ್ದು, ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿಲ್ಲ. ಕಾರ್ಯಕ್ರಮಗಳನ್ನು ಸ್ಥಳೀಯ ಟಿವಿ ಚಾನೆಲ್‌ಗಳ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ 8 ದಿನಗಳ ಕಾಲ ದೇವಳದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.
ಮನಪಾದಿಂದ ಅಲಂಕಾರ: ನಗರದ ರಾಜಬೀದಿಗಳ ಅಲಂಕಾರ ವಿಶೇಷವಾಗಿ ನಡೆಯಲಿದೆ. ವಿದ್ಯುದ್ದೀಪಾಲಂಕಾರ ಸಂಪೂರ್ಣ ಜವಾಬ್ದಾರಿಯನ್ನು ಈ ವರ್ಷದಿಂದ ಮಂಗಳೂರು ಮಹಾನಗರ ಪಾಲಿಕೆ ವಹಿಸಿಕೊಂಡಿದ್ದು, ಸರ್ವಸದಸ್ಯರೂ ಸಮ್ಮತಿಸಿದ್ದಾರೆ. ಇದಕ್ಕೆ ಸಹಕರಿಸಿರುವ ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ ತಿಳಿಸಿದರು.