ಬೀರೂರು ಮಾರ್ಗದ ಕ್ಯಾಂಪ್ ಬಡಾವಣೆಯಲ್ಲಿ ಮನೆಗಳ ಮೇಲೆ ಮಂಗಗಳು ಉಪಟಳ ನಡೆಸುತ್ತಿರುವುದು.  
ನ್ಯೂಸ್

ಮಂಗಗಳ ಉಪಟಳಕ್ಕೆ ಬೇಸತ್ತ ಜನತೆ

ಬೀರೂರು: ಪಟ್ಟಣ ವ್ಯಾಪ್ತಿಯಲ್ಲಿ ಮಂಗಗಳ ಹಾವಳಿ ಹೆಚ್ಚಾಗಿದ್ದು ,ಜನರು ಮನೆಯಿಂದ ಹೊರಬರಲು ಭಯ ಪಡುತ್ತಿದ್ದಾರೆ. ಮನೆ ಅಂಗಳದಲ್ಲಿ, ಮಾಳಿಗೆ ಮೇಲೆ ತಂಡೋಪ ತಂಡವಾಗಿ ಬರುವ ಮಂಗಗಳು ಕಣ್ಣಿಗೆ ಕಂಡಿದ್ದನ್ನು ಕಿತ್ತು ಹಾಳು ಮಾಡುತ್ತಿವೆ.

ಪಟ್ಟಣದ ಮಾರ್ಗದ ಕ್ಯಾಂಪ್, ಬಾವಿಮನೆ ಬೀದಿ, ಅಂಚೇರಬೀದಿ, ಲಿಂಗದಹಳ್ಳಿ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಹಿಂಡು ಹಿಂಡಾಗಿ ಬರುವ ಮಂಗಗಳು ಮನೆಗಳ ಛಾವಣಿ, ಕಬ್ಬಿಣದ ಶೀಟ್ ಹಾಗೂ ಆರ್‌ಸಿಸಿಗಳ ಮೇಲೆ ತಮ್ಮ ಉಪಟಳ ಆರಂಭಿಸುತ್ತಿವೆ. ಮನೆಯಂಗಳದಲ್ಲಿ ಬೆಳೆದಿರುವ ಸೀಬೆ, ಸಪೋಟ, ತೆಂಗು, ಮಾವು ಹೀಗೆ ಕೈಗೆ ಸಿಕ್ಕ ಹಣ್ಣಗಳನ್ನು ಕಿತ್ತು ಹಾಕುತ್ತಿವೆ. ಮನೆ ಒಳಗಡೆಯೂ ನುಗ್ಗಿ ಕೈಗೆ ಸಿಕ್ಕಿದ್ದನ್ನು ಎತ್ತಿಕೊಂಡು ಹೋಗುವ ಸಂದರ್ಭದಲ್ಲಿ ಅಡ್ಡಗಟ್ಟಲು ಮುಂದಾದರೆ ಮೈಮೇಲೆ ಎರಗುತ್ತವೆ. ಇದರಿಂದ ಮಕ್ಕಳು, ಮಹಿಳೆಯರು ಹಾಗೂ ಜನತೆ ಭಯಭೀತರಾಗಿದ್ದಾರೆ.

ಮಕ್ಕಳು ಶಾಲೆಗೆ ಹೋಗುವುದಕ್ಕೂ ಹೆದರುತ್ತಿದ್ದಾರೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಗುಂಪಾಗಿ ಕುಳಿತುಕೊಳ್ಳುತ್ತಿರುವ ಮಂಗಗಳಿಗೆ ಭಯ ಪಡುವಂತಾಗಿದೆ. ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಜಿಗಿಯುತ್ತಿರುವುದನ್ನು ಕಂಡು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ಓವರ್‌ಹೆಡ್ ಟ್ಯಾಂಕ್‌ನ ಬಳಿ ಗುಂಪಾಗಿ ಸೇರುವ ಮಂಗಗಳು ಕೆಲಸಗಾರರಲ್ಲೂ ಭಯ ಹುಟ್ಟಿಸಿವೆ. ಈ ಬಗ್ಗೆ ಪುರಸಭೆಗೆ ದೂರು ಕೊಟ್ಟರೆ ಅವರು ವನ್ಯ ಮೃಗಗಳನ್ನು ಅರಣ್ಯ ಇಲಾಖೆಯವರು ಹಿಡಿಯುವುದು ಹಾಗೂ ಕಾಡಿಗೆ ಬಿಟ್ಟು ಬರಬೇಕು ಎಂದು ಸಂಜಾಯಿಶಿ ಹೇಳುತ್ತಾರೆ.

ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೆ ಪಟ್ಟಣ ವ್ಯಾಪ್ತಿಯಲ್ಲಿ ಇರುವುದರಿಂದ ಇವುಗಳನ್ನು ಪುರಸಭೆ ಹಿಡಿಸಬೇಕು ಎನ್ನುತ್ತಾರೆ. ಹೀಗೆ ಎರಡು ಇಲಾಖೆಗಳು ಒಬ್ಬರ ಮೇಲೊಬ್ಬರೂ ಹೇಳಿಕೊಂಡು ನಾಗರಿಕರ ಸಮಸ್ಯೆಯನ್ನು ಯಾರೂ ಪರಿಹರಿಸುತ್ತಿಲ್ಲ ಎಂದು ಮಾರ್ಗದಕ್ಯಾಂಪ್‌ನ ನಿವಾಸಿಗಳು ಪುರಸಭೆ ಮತ್ತು ಅರಣ್ಯ ಇಲಾಖೆಯ ವಿರುದ್ಧ ಆರೋಪಿಸುತ್ತಿದ್ದಾರೆ.