ನ್ಯೂಸ್

ಭ್ರಷ್ಟಾಚಾರ, ಮೋಸ, ಸುಳ್ಳು ಕಾಂಗ್ರೆಸ್ ಮನೆದೇವ್ರು

ಚಿತ್ರದುರ್ಗ: ಸುಳ್ಳು ಬಿಜೆಪಿಗರ ಮನೆ ದೇವರಲ್ಲ. ಭ್ರಷ್ಟಾಚಾರ, ಮೋಸ, ಅಸತ್ಯ ಕಾಂಗ್ರೆಸ್ ಮನೆ ದೇವ್ರು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಎಷ್ಟು ಬೇಕಾದರೂ ಭ್ರಷ್ಟಾಚಾರ ಮಾಡಬಹುದು. ಅದರಲ್ಲಿ ಸಿಕ್ಕಿಬಿದ್ದು, ತಮ್ಮ ಬುಡಕ್ಕೆ ಬಂದ ನಂತರ ಹಿಂದಿರುಗಿಸಿದರೆ, ಅವರೆಲ್ಲ ಪ್ರಾಮಾಣಿಕರೆಂಬ ಅಘೋಷಿತ ಕಾನೂನು ಕಾಂಗ್ರೆಸ್‌ನಿಂದ ಜಾರಿಯಾದಂತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್‌ನ ರಾಜ್ಯ ಸರ್ಕಾರದಿಂದ ದಿನಕ್ಕೊಂದು ಹಗರಣ ಬಯಲಾಗುತ್ತಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮಾತ್ರ ರಾಜೀನಾಮೆ ನೀಡುತ್ತಿಲ್ಲ. ಯಾವುದಕ್ಕೂ ಜಗ್ಗೋದಿಲ್ಲ, ಬಗ್ಗೋದಿಲ್ಲ ಅಂದವರು ನಿವೇಶನಗಳನ್ನೇಕೆ ಮುಡಾಗೆ ವಾಪಸು ಕೊಟ್ಟರು. ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ 5 ಎಕರೆ ಜಮೀನನ್ನೇಕೆ ಹಿಂದಿರುಗಿಸಿದರು. ಭ್ರಷ್ಟಾಚಾರ ಎಸಗಿ, ನಂತರ ಹಿಂದಿರುಗಿಸಿದರೆ ಕಾನೂನು ಕ್ರಮ ಬೇಡವೇ ಎಂದು ವಾಗ್ದಾಳಿ ನಡೆಸಿದರು.

ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಕ್ರಮಕ್ಕೆ ರಾಜ್ಯಪಾಲರ ಆದೇಶ ಸರಿಯಾಗಿದೆ. ನ್ಯಾಯಾಂಗದ ಆದೇಶ ಬೀದಿಯಲಿ ಪ್ರಶ್ನಿಸೋದು ಸಂವಿಧಾನ ವಿರೋಧಿ ನಡೆಯಾಗಿದೆ. ಅಲ್ಲದೆ, ನಿಂದನೆಯಾಗಲಿದೆ. ಏನೇ ಇದ್ದರೂ ನ್ಯಾಯಾಂಗದಲ್ಲೇ ಪ್ರಶ್ನಿಸಲು ಅವಕಾಶವಿದೆ ಎಂದು ಕೈ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

ಸಿದ್ದರಾಮಯ್ಯ ಇರೋವರೆಗೆ ಮುಸಲ್ಮಾನರು. ಬಳಿಕ ಚೊಂಬೇ ಗತಿ ಎಂಬ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆಯೂ ಸಿಎಂ ಕುರಿತು ಸ್ಪಷ್ಟಪಡಿಸುತ್ತದೆ. ಈ ಕುರಿತು ಪ್ರತಿಕ್ರಿಯಿಸಲಾರೆ. ರಾಜ್ಯದ ಜನರೇ ತೀರ್ಮಾನಿಸಲಿ ಎಂದರು.