ನ್ಯೂಸ್

ಭ್ರಷ್ಟ ಬಿಜೆಪಿಗರೆ ಕರಿ ಕಾಗೆ

ಚಿತ್ರದುರ್ಗ: ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಗರೆ ಕರಿ ಕಾಗೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಟೀಕಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವ ಕಪ್ಪು ಚುಕ್ಕೆಯೂ ಇಲ್ಲದ ಆಡಳಿತಗಾರ ಎಂಬುದಾಗಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ಸಿಗರು ಬಣ್ಣಿಸುತ್ತಿದ್ದರು. ಆದರೀಗ ಕರಿ ಕಾಗೆಯಂತಾಗಿದ್ದಾರೆ ಎಂಬ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಅರ್ಧ ಶಿವಮೊಗ್ಗ ಬಿ.ಎಸ್.ಯಡಿಯೂರಪ್ಪ, ಅರ್ಧ ಬೆಂಗಳೂರು ಗೌಡರ ಕುಟುಂಬದ ಪಾಲಾಗಿದೆ. ಇಷ್ಟೊಂದು ಆಸ್ತಿ ಹೇಗೆ ಬಂತು ಎಂಬುದನ್ನು ಮೊದಲು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಆರ್.ಅಶೋಕ್, ಮುರುಗೇಶ್ ನಿರಾಣಿ, ಡಾ.ಸುಧಾಕರ್, ಶಶಿಕಲಾ ಜೊಲ್ಲೆ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ಪೂರೈಸಿರುವ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಲು ರಾಜ್ಯಪಾಲರಿಗೆ ಅನುಮತಿ ಕೇಳಿದರೆ ನೀಡಿಲ್ಲ. ಇನ್ನೂ ಯಾವ ತನಿಖೆಯೂ ನಡೆಯದ ಸಿದ್ದರಾಮಯ್ಯ ವಿರುದ್ಧದ ದೂರನ್ನು ಓದದೆ, ಪ್ರಾಸಿಕ್ಯೂಷನ್‌ಗೆ ನೀಡಿರುವುದರ ಹಿಂದೆ ಕುತಂತ್ರವಿದೆ ಎಂದು ಆರೋಪಿಸಿದರು.