ಭೇರ್ಯ-ಮಿರ್ಲೆ ಮಾರ್ಗ 
ನ್ಯೂಸ್

ಭೇರ್ಯ-ಮಿರ್ಲೆ ಮಾರ್ಗದಲ್ಲಿ ಸಂಚರಿಸುವುದೇ ನರಕ

ಭೇರ್ಯ: ಹಲವು ವರ್ಷಗಳಾದರೂ ಅಭಿವೃದ್ಧಿ ಕಾಣದ ರಸ್ತೆಗಳು, ವಾಹನ ಸವಾರರು ಓಡಾಡಲಾಗದ ಪರಿಸ್ಥಿತಿ, ದಿನನಿತ್ಯ ಒಂದಲ್ಲ ಒಂದು ಕಹಿ ಘಟನೆಗಳು.

ಇದು ಸಾಲಿಗ್ರಾಮ ತಾಲೂಕಿನ ಭೇರ್ಯ ಮತ್ತು ಮಿರ್ಲೆ ಮುಖ್ಯ ರಸ್ತೆ ಸ್ಥಿತಿ. ಅಭಿವೃದ್ಧಿ ಕಾಣದೆ ಜನರ ಸಂಚಾರಕ್ಕೆ ಯೋಗ್ಯವಲ್ಲದ ರಸ್ತೆಯಾಗಿದೆ. ಅಭಿವೃದ್ಧಿ ಮಾಡುವಂತೆ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹದಗೆಟ್ಟ ರಸ್ತೆಯಿಂದ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

ಸಾಲಿಗ್ರಾಮ ಹೊಸ ತಾಲೂಕು ಆದ ಮೇಲೆ ಭೇರ್ಯ ಮತ್ತು ಮಿರ್ಲೆ ಎರಡೂ ದೊಡ್ಡ ಗ್ರಾಮಗಳಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಿರುವುದರಿಂದ ನಿತ್ಯವೂ ಜನರ ಸಂಚಾರ ಹೆಚ್ಚಾಗಿದೆ. ಹಾಗಾಗಿ ಈ ರಸ್ತೆ ಜನರಿಗೆ ಮುಖ್ಯವಾಗಿದ್ದು, ಅಭಿವೃದ್ಧಿ ಆಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ. ಈ ರಸ್ತೆ ಬಿಟ್ಟರೆ ಭೇರ್ಯ ಮತ್ತು ಮಿರ್ಲೆಗೆ ಜನ ಹೋಗಲು ಸಾಲಿಗ್ರಾಮ ಅಥವಾ ಕೆ.ಆರ್.ನಗರ ಸುತ್ತಿ ಹೋಗಬೇಕಾದ ಪರಿಸ್ಥಿತಿ ಇದೆ.

ಮಿರ್ಲೆ ಗ್ರಾಮದಲ್ಲಿ ಜಮೀನು, ಹಣಕಾಸು ವಿವಿಧ ರೀತಿಯ ಒಪ್ಪಂದದ ಪತ್ರಗಳು, ಮಾರಾಟ ಮತ್ತು ಖರೀದಿ ವ್ಯವಹಾರ ಮಾಡಿಸಿಕೊಳ್ಳಲು ನೋಂದಣಿಗೆ ತಾಲೂಕಿನ ಕೊನೆಯ ಭಾಗದ ಗ್ರಾಮಗಳಾದ ಎರೆಮನಗನಹಳ್ಳಿ, ಬೆಟ್ಟಳ್ಳಿ, ಗುಳುವಿನ ಅತ್ತಿಕುಪ್ಪೆ, ಚಿಕ್ಕಭೇರ್ಯ, ಕಾವಲ್ ಹೊಸೂರು, ಹರದನಹಳ್ಳಿ, ಹೆಬ್ಸೂರು, ಕುಪ್ಪಳ್ಳಿ, ತಂದ್ರೆ ಮಿರ್ಲೆಗೆ ಬರಲು ಸೂಕ್ತ ಬಸ್ ವ್ಯವಸ್ಥೆಯೂ ಇಲ್ಲ. ಬೈಕ್‌ಗಳಲ್ಲಿ ಬರುವುದಾದರೆ ರಸ್ತೆಗಳು ಸರಿ ಇಲ್ಲ. ಸಬ್ ರಿಜಿಸ್ಟರ್ ಆಫೀಸ್‌ಗೆ ಹೋಗಬೇಕು ಎಂದರೆ ಜನರಿಗೆ ಅಯ್ಯೋ ರಾಮ ಎನ್ನುವಂತಾಗಿದೆ.

ಬಸ್ ಸೌಲಭ್ಯ ಕೊರತೆ: ಸಾಲಿಗ್ರಾಮ ತಾಲೂಕಾಗಿದ್ದರೂ ಮಿರ್ಲೆಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದಂತಾಗಿದೆ. ಭೇರ್ಯ-ಮಿರ್ಲೆಗೆ ದಿನನಿತ್ಯ ಜನರ ಸಂಪರ್ಕ ಹೆಚ್ಚಾಗಿದ್ದರೂ ಬಸ್‌ಗಳ ಸಂಪರ್ಕವೇ ಇಲ್ಲ. ಆಟೋಗಳ ಸಂಪರ್ಕವೂ ಇಲ್ಲ, ಇದರಿಂದ ಜನರು ಬೇಸತ್ತು ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಶಾಪ ಹಾಕುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಅಧಿಕಾರಿಗಳನ್ನು ಕೇಳಿದರೆ ರಸ್ತೆ ಸರಿಯಿಲ್ಲದ ಕಾರಣ ಅಲ್ಲಿ ಬಸ್‌ಗಳು ಓಡಾಡಲು ಸಾಧ್ಯವಾಗುವುದಿಲ್ಲ. ರಸ್ತೆ ಆದ ಬಳಿಕ ಬಸ್‌ಗಳ ವ್ಯವಸ್ಥೆ ಕಲ್ಪಿಸುತ್ತೇವೆ ಎನ್ನುತ್ತಾರೆ. ರಸ್ತೆ ಅಭಿವೃದ್ಧಿ ಕಾಣದಿರಲು ಜನಪ್ರತಿನಿಧಿಗಳ ನಿರ್ಲಕ್ಷೃವೇ ಕಾರಣ. ರಸ್ತೆ ಅಭಿವೃದ್ಧಿಗೆ ಈ ಹಿಂದೆ ಇದ್ದ ಸರ್ಕಾರ ನಿರ್ಲಕ್ಷಿಸಿತ್ತು. ಈಗಿನ ಕಾಂಗ್ರೆಸ್ ಸರ್ಕಾರವಾದರೂ ರಸ್ತೆ ಅಭಿವೃದ್ಧಿಗೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಶಾಲಾ ವಾಹನಗಳ ಒಡಾಟ: ಭೇರ್ಯ ಮತ್ತು ಮಿರ್ಲೆ ಗ್ರಾಮಗಳಲ್ಲಿ ಶಾಲೆಗಳು ಹೆಚ್ಚಾಗಿರುವುದರಿಂದ ವಿದ್ಯಾಭ್ಯಾಸ ಪಡೆಯಲು ವಿದ್ಯಾರ್ಥಿಗಳು ಹೆಚ್ಚಾಗಿ ಈ ರಸ್ತೆಯಲ್ಲೇ ಸಂಚರಿಸುತ್ತಾರೆ. ಶಾಲೆಯ ಮುಖ್ಯ ಶಿಕ್ಷಕರು ರಸ್ತೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಆದರೂ ಅಧಿಕಾರಿಗಳು ಇತ್ತ ತಿರುಗಿಯೂ ನೋಡಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ಆಗುವವರೆಗೂ ಅಭಿವೃದ್ಧಿ ಆಗಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಹೀಗಾಗಿ ಅಲ್ಲಿಯವರೆಗೆ ರಸ್ತೆಯಲ್ಲಿರುವ ಗುಂಡಿಗಳನ್ನಾದರೂ ಮುಚ್ಚಿ ಸಮತಟ್ಟು ಮಾಡುವ ವ್ಯವಸ್ಥೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಡಬೇಕಾಗಿದೆ.

ಬಾಕಿ ಉಳಿದ ಕಾಮಗಾರಿ: ಮಿರ್ಲೆ-ಭೇರ್ಯ ಮುಖ್ಯ ರಸ್ತೆ ಅಭಿವೃದ್ಧಿಗೆ ಮಾಜಿ ಶಾಸಕ ಸಾರಾ ಮಹೇಶ್ ಅವರು ಈ ಹಿಂದೆ ಭೂಮಿಪೂಜೆ ಮಾಡುವ ಮೂಲಕ ಚಾಲನೆ ನೀಡಿದ್ದರು. ಮಿರ್ಲೆ ಗ್ರಾಮದಿಂದ ಬೀಚನಹಳ್ಳಿ ಗೇಟ್‌ವರೆಗೆ ಡಾಂಬರೀಕರಣ ಆಗಿದೆ. ಆದರೆ ಇಲ್ಲಿಂದ ಬಟಿಗನಹಳ್ಳಿ ಮತ್ತು ಭೇರ್ಯವರೆಗೆ ಸುಮಾರು ಎರಡೂವರೆ ಕಿ.ಮೀ. ಬಾಕಿ ಉಳಿದಿದೆ.

ಹಾಸನ, ಹೊಳೆನರಸೀಪುರ, ಮಂಡ್ಯ, ಕೆ.ಆರ್.ಪೇಟೆ, ಸೋಮವಾರಪೇಟೆ, ಸಾಲಿಗ್ರಾಮ, ಮೈಸೂರು, ಕೆ.ಆರ್.ನಗರ, ಬೆಟ್ಟದಪುರ ಚುಂಚನಕಟ್ಟೆ, ಮಾರ್ಗವಾಗಿ ಭೇರ್ಯ-ಮಿರ್ಲೆಗೆ ಹೆಚ್ಚು ಜನರು ಸಂಚರಿಸುತ್ತಾರೆ. ಇಷ್ಟೂ ಮಾರ್ಗಗಳಿಂದ ಮಿರ್ಲೆಗೆ ಬಸ್ ಸೌಲಭ್ಯವೂ ಇಲ್ಲ. ಹೀಗಾಗಿ ಸಂಬಂಧಪಟ್ಟ ಇಲಾಖೆಯವರು ಬಸ್ ಸೌಲಭ್ಯ ಕಲ್ಪಿಸಿ ಕೊಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

2.50 ಕೋಟಿ ರೂ. ವೆಚ್ಚದಲ್ಲಿ 2 ಕಿ.ಮೀ. ದೂರದ ವರೆಗೆ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಕ್ರಿಯಾಯೋಜನೆ ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಹಣ ಬಿಡುಗಡೆ ಆಗದ ಕಾರಣ ಮತ್ತೆ ಹೊಸ ಕ್ರಿಯಾಯೋಜನೆ ಮಾಡಿ ಕಳುಹಿಸಲಾಗಿದೆ. ಹಣ ಬಿಡುಗಡೆ ಆದ ಕೂಡಲೇ ಕಾಮಗಾರಿ ಶುರು ಮಾಡಲಾಗುವುದು.
ಲಿಖಿತಾ, ಇಂಜಿನಿಯರ್, ಲೋಕೋಪಯೋಗಿ ಇಲಾಖೆ

ಈ ರಸ್ತೆಯ ದುಸ್ಥಿತಿ ಬಗ್ಗೆ ಶೀಘ್ರದಲ್ಲೇ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮತ್ತು ನೂತನ ಶಾಸಕರೊಂದಿಗೆ ಚರ್ಚಿಸಿ, ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು.
ಜಯಲಕ್ಷ್ಮೀ ಕೃಷ್ಣೇಗೌಡ, ಅಧ್ಯಕ್ಷೆ, ಭೇರ್ಯ ಗ್ರಾಪಂ

ಈ ಹಿಂದಿನ ಶಾಸಕರು ಮಿರ್ಲೆಯಿಂದ ಭೇರ್ಯವರೆಗೆ ಕಾಮಗಾರಿ ಪೂರ್ಣ ಮಾಡಬೇಕಿತ್ತು, ಆದರೆ ಅರ್ಧಕ್ಕೆ ಉಳಿದಿದ್ದು, ವಾಹನಗಳು ಮಾತ್ರವಲ್ಲ ಪಾದಚಾರಿಗಳೂ ಓಡಾಡಲಾಗದಂತ ಸ್ಥಿತಿ ಇದೆ. ಶಾಸಕರೊಂದಿಗೆ ಶೀಘ್ರದಲ್ಲೇ ಮಾತನಾಡಿ ಈ ಸಮಸ್ಯೆಗೆ ಪರಿಹಾರ ಮಾಡಲಾಗುವುದು.
ಸಿ.ಪಿ.ರಮೇಶ್, ಕಾಂಗ್ರೆಸ್ ಮುಖಂಡ

ಈ ರಸ್ತೆಯಲ್ಲಿ ಜನರು ಒಡಾಡಲು ಆಗುವುದಿಲ್ಲ. ಮಂಡಿಯುದ್ದ ಗುಂಡಿಗಳಿವೆ. ಮಳೆ ಬಿದ್ದರಂತೂ ಕೆಸರಗದ್ದೆ ಆಗುತ್ತದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಭಿವೃದ್ಧಿಗೆ ಆಗಲಿದಿಯೇ ಎಂದು ಕಾದು ನೋಡಬೇಕಿದೆ.
ರೇಖಾ ಬಿ.ಎಚ್, ಮಹದೇವ್, ಗ್ರಾಪಂ ಸದಸ್ಯೆ, ಬಟಿಗನಹಳ್ಳಿ