ನ್ಯೂಸ್

ಭೂಮಿಗೆ ಗಂಗೆ ಇಳಿಸಿ ಬದುಕು ಕೊಟ್ಟವರು ಭಗೀರಥ

ತಮ್ಮ ಪ್ರಯತ್ನದ ಮೂಲಕ ಗಂಗೆಯನ್ನು ಭೂಮಿಗೆ ಕರೆತಂದವರು ಭಗೀರಥರು. ಗಂಗೆಯನ್ನು ಭೂಮಿಗೆ ಇಳಿಸಿ ನಾವೆಲ್ಲರೂ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟರು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀ ಭಗೀರಥ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು. ಭಗೀರಥ ಪ್ರಯತ್ನ ಎಂಬುದನ್ನು ನಾವು ಬಾಲ್ಯದಿಂದಲೂ ಕೇಳಿರುತ್ತೇವೆ. ಏಕೆಂದರೆ ನಾವು ಜೀವನದಲ್ಲಿ ಸೋತಾಗ ಹಿರಿಯರು ನಮಗೆ ಭಗೀರಥರಂತೆ ಪ್ರಯತ್ನ ಪಡು ಎಂದು ಹೇಳುತ್ತಿದ್ದರು. ಅದು ನನಗೆ ಇಂದಿಗೂ ನೆನಪಿದೆ. ಅವರ ಸಾಧನೆ ಅವರು ಪಟ್ಟಂತಹ ಶ್ರಮ ಅಪಾರವಾದದ್ದು ಎಂದು ಹೇಳಿದರು.

ಪುರಾಣದಲ್ಲಿ ಭಗೀರಥರ ಬಗ್ಗೆ ತುಂಬ ವಿಶೇಷವಾದಂತಹ ವಿಚಾರದಿಂದ ಕೂಡಿರುವುದನ್ನು ನಾವು ಕಾಣಬಹುದಾಗಿದೆ. ಅವರ ಪ್ರತಿಯೊಂದು ಆದರ್ಶವನ್ನು ನಮ್ಮ ಜೀವನದಲ್ಲಿ ಅಳವಡಿಕೊಂಡು ಜೀವನವನ್ನು ಸಾಗಿಸಬೇಕು. ಪ್ರಯತ್ನವನ್ನು ಪದೇಪದೆ ಮಾಡುತ್ತಿದ್ದರೆ ತಕ್ಕ ಪ್ರತಿಫಲ ಸಿಗುತ್ತದೆ, ಅದಕ್ಕೆ ನಮಗೆಲ್ಲ ಸ್ಪಷ್ಟ ಉದಾಹರಣೆಯೇ ಭಗೀರಥ ಅವರು ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ಭಗೀರಥ ಎಂಬ ಹೆಸರೇ ಒಂದು ಶಕ್ತಿ. ಅವರು ಮಾಡಿದಂತಹ ಸಾಧನೆ ಅವರು ಪಟ್ಟಂತಹ ಶ್ರಮ, ಅವರು ಮಾಡಿದಂತಹ ಸಾಧನೆಗೆ ಅಷ್ಟೊಂದು ಶಕ್ತಿ ಎಂದು ಹೇಳಿದರು.

ಯಾವುದೇ ವ್ಯಕ್ತಿಯಾದರೂ ಒಂದು ಸಾಧನೆ ಮಾಡಬೇಕೆಂದರೆ ಶ್ರಮ ಮತ್ತು ಪರಿಶ್ರಮ ಎರಡು ಮುಖ್ಯವಾಗುತ್ತದೆ. ಶ್ರಮ ಮತ್ತು ಪರಿಶ್ರಮ ಭಗೀರಥನ ಪ್ರಯತ್ನ ಅಪಾರವಾದದ್ದು ಎಂದರು.

ಭಗೀರಥರು ಗಂಗೆಯನ್ನು ಭೂಮಿಗೆ ಕರೆತರಲು ಇದ್ದ ಅವರ ಶ್ರಮ, ಭಕ್ತಿ, ಛಲ, ಸಾಹಸ, ಸಾಧನೆ ಎಷ್ಟು ಎಂಬುದನ್ನು ನಾವು ತಿಳಿಯಬೇಕು ಅದೇ ಭಗೀರಥ ಪ್ರಯತ್ನ ಎಂದು ಹೇಳಿದರು. ಭಗೀರಥರ ಸಾಧನೆಗೆ ಇತಿಹಾಸದಲ್ಲಿಯೇ ಇವರಿಗೆ ಸಮಾನವಾದ ಶಕ್ತಿ ಯಾರೂ ಇಲ್ಲ. ಅಂತಹ ಶ್ರೇಷ್ಠ ವ್ಯಕ್ತಿ, ಮಹಾತ್ಮರು ಭಗೀರಥರು ಎಂದು ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಅಪರ ಆಯುಕ್ತ ಜಗನ್ನಾಥ್ ಸಾಗರ್ ಮಾತನಾಡಿ, ಪ್ರಯತ್ನದ ಪರಮ ಸೃಷ್ಟಿಯ ಭಗೀರಥ ಪ್ರಯತ್ನ. ದೇವಗಂಗೆಯನ್ನು ಭೂಮಿಗೆ ತಂದು ಇಡೀ ಮನುಕುಲವನ್ನು ಉದ್ದಾರ ಮಾಡಿದ ಮಹಾತ್ಮ ಭಗೀರಥ ಎಂದು ಹೇಳಿದರು.

ಉಪ್ಪು ಸಕ್ಕರೆಗಿಂತ ಮಿಗಿಲಾದುದು ಎಂದು ಕರೆದವರು ಭಗೀರಥರು. ಇಂತಹ ಉಪ್ಪಾರರನ್ನು ಗುರುತಿಸಿ ಅವರಿಗೂ ಸಮಾಜದಲ್ಲಿ ಸಮಾನತೆ ದೊರೆಯುವಂತೆ ಸರ್ಕಾರ ಗಮನಹರಿಸಬೇಕು ಎಂದು ಹೇಳಿದರು.

ಇದು ಜ್ಞಾನದ ಯುಗವಾಗಿರುವುದರಿಂದ ಎಲ್ಲರೂ ಶಿಕ್ಷಣದ ಕಡೆ ಮುಖ ಮಾಡಬೇಕು. ನಾವು ನಮ್ಮ ಜೀವನದಲ್ಲಿ ಎರಡು ರೀತಿಯ ಅಧಿಕಾರವನ್ನು ಪಡೆದುಕೊಳ್ಳಬೇಕು. ರಾಜಕೀಯ ಅಧಿಕಾರ ಮತ್ತು ನೌಕರಶಾಹಿ ಅಧಿಕಾರ. ಅಧಿಕಾರ ಪಡೆಯುವ ಶಕ್ತಿ ನಮ್ಮಲ್ಲಿಯೇ ಇದೆ. ಉತ್ತಮ ಶಿಕ್ಷಣವನ್ನು ಪಡೆದು, ಉತ್ತಮವಾದ ಹುದ್ದೆಗಳನ್ನು ಅಲಂಕರಿಸಿ ಪ್ರಯತ್ನ ಮಾಡಿದರೆ ಅದು ನಿಜವಾದ ಭಗೀರಥನ ಪ್ರಯತ್ನ ಆಗುತ್ತದೆ ಎಂದು ತಿಳಿಸಿದರು.

ಭಗೀರಥ ಪೀಠದ ಶ್ರೀ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್ ಇತರರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ಕಲಾಮಂದಿರದವರೆಗೆ ಶ್ರೀ ಭಗೀರಥರ ಭಾವಚಿತ್ರ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿ ಗಮನ ಸೆಳೆದವು.