ಪಿರಿಯಾಪಟ್ಟಣ: ಯುವಕರು ಭಾಷೆಯ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳದೆ ಇಲ್ಲಿನ ನೆಲ, ಜಲ, ಸಂಸ್ಕೃತಿಯನ್ನು ತಿಳಿದುಕೊಳ್ಳಲು ಮುಂದಾಗಬೇಕು ಎಂದು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ತಿಳಿಸಿದರು.
ಪಿರಿಯಾಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಬಿಜಿಎಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಹಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಎಲ್ಲ ಭಾಷೆಗಳ ಮೇಲೆ ಪ್ರೀತಿ ಇರಬೇಕು. ನಮ್ಮ ಭಾಷೆಯ ಬಗ್ಗೆ ಅದರ ಸಾಹಿತ್ಯದ ಬಗ್ಗೆ ಪ್ರತಿಯೊಬ್ಬರೂ ಅರಿವು ಮೂಡಿಸಿಕೊಳ್ಳಬೇಕು. ಪಂಚ ದ್ರಾವಿಡ ಭಾಷೆಗಳಲ್ಲಿ ಅತ್ಯಂತ ಹಳೆಯದಾದ ಕನ್ನಡ ಸಾಹಿತ್ಯ ಮಹತ್ವವಾಗಿದ್ದು, ಇಲ್ಲಿನ ಕವಿಗಳು ನೀಡಿರುವ ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಸಂದೇಶ ಇಡೀ ವಿಶ್ವಕ್ಕೆ ಅನ್ವಯವಾಗುವಂತಹದು ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಕನ್ನಡ ನೆಲದ ಸಾಹಿತ್ಯ ಮತ್ತು ಸಂದೇಶಗಳು ಇತರ ಭಾಷೆಗಳಿಗೆ ತಲುಪಿ ಅಲ್ಲಿಯ ಜನರು ಕನ್ನಡ ಕಲಿಯುತ್ತಿರುವುದು, ಸಂಸ್ಕೃತಿಯನ್ನು ಅರಿಯವಲ್ಲಿ ಉತ್ಸುಕತೆ ತೋರುತ್ತಿದ್ದಾರೆ ಎಂದರು.
ಮಾತನಾಡುವ ಗೊಂಬೆ ಕಲಾವಿದೆ ಎಂ.ಕಾವ್ಯಾ ವಿದ್ಯಾರ್ಥಿಗಳನ್ನು ನಗೆಗಡಲಲ್ಲಿ ತೇಲಿಸಿದರು. ಮಿಮಿಕ್ರಿ ಕಲಾವಿದ ಮಂಜು ಮಿಮಿಕ್ರಿ ಮೂಲಕ ಎಲ್ಲರನ್ನು ರಂಜಿಸಿದರು. ಬಿಜಿಎಸ್ ಆಡಳಿತಾಧಿಕಾರಿ ಸುಧಾಕರ್, ಜಿಲ್ಲಾ ಕಸಾಪ ಕಾರ್ಯದರ್ಶಿ ಮ.ನ.ಲತಾ ಮೋಹನ್, ಪ್ರಾಂಶುಪಾಲ ಕೆ.ಆರ್.ಪ್ರವೀಣ್ ಮಾತನಾಡಿದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗೋವಿಂದೇಗೌಡ, ಸಿದ್ದಾಪುರ ಪಿಯು ಕಾಲೇಜಿನ ಕಾಳೇಗೌಡ, ಕಸಾಪ ತಾಲೂಕು ಅಧ್ಯಕ್ಷ ನವೀನ್‌ಕುಮಾರ್, ಸಹಾಯಕ ಪ್ರಾಧ್ಯಾಪಕ ಎಸ್.ಎಂ.ಮಹದೇವ್, ಉಪನ್ಯಾಸಕರಾದ ಇಲ್ಯಾಸ್‌ಖಾನ್, ಅನುಶ್ರೀ, ಮೇಘನಾ, ಚೆನ್ನಾಂಬಿಕಾ, ಸ್ವಾಮಿ, ವ್ಯವಸ್ಥಾಪಕ ಮಂಜು, ಮುಖ್ಯಶಿಕ್ಷಕಿ ದಿವ್ಯಾ ಮತ್ತಿತರರು ಹಾಜರಿದ್ದರು.