ಬಾಳೆಹೊನ್ನೂರಿನ ಜೆಸಿಐ ಸಂಸ್ಥೆ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರವನ್ನು ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಉದ್ಘಾಟಿಸಿದರು. ನವೀನ್ ಮಿಸ್ಕಿತ್, ಇಬ್ರಾಹಿಂ ಶಾಫಿ, ವಿಕಾಸ್ ಗೂಗ್ಲಿಯಾ, ಮದನ್, ಶಶಿಧರ್ ಇದ್ದರು. 
ನ್ಯೂಸ್

ಭಾಷಣ ಕೇಳುಗರಿಗೆ ಭೂಷಣವಾಗಿರಲಿ

ಬಾಳೆಹೊನ್ನೂರು: ಸಭೆ, ಸಮಾರಂಭಗಳ ವೇದಿಕೆಯಲ್ಲಿ ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಭೂಷಣವಾಗಿರಬೇಕು ಎಂದು ಜೆಸಿಐ ರಾಷ್ಟ್ರೀಯ ತರಬೇತುದಾರ ಡಾ. ನವೀನ್ ಲಾಯ್ಡ ಮಿಸ್ಕಿತ್ ಹೇಳಿದರು. ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯಿಂದ ಬೆಳಸೆಯ ಖಾಂಡ್ಯ ಪ್ಲಾಂಟರ್ಸ್‌ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪರಿಣಾಮಕಾರಿ ಭಾಷಣ ಕಲೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಅತಿಥಿಗಳು ಮಾಡುವ ಭಾಷಣ ಕೇಳುಗರಿಗೆ ಸ್ಫೂರ್ತಿಯಾಗಿರಬೇಕು. ಇನ್ನಷ್ಟು ಕೇಳಬೇಕು ಎನಿಸಬೇಕು. ಭಾಷಣದ ಸಂದರ್ಭದಲ್ಲಿ ನಾವು ಅಲ್ಲಿನ ಸ್ಥಿತಿಗತಿಗಳನ್ನು ಅರಿತು, ಆ ಸಮಯಕ್ಕೆ ತಕ್ಕಂತೆ ಮಾತನಾಡಬೇಕು. ಆಗ ಭಾಷಣಕಾರನಿಗೂ ಒಂದು ಗೌರವ ಹಾಗೂ ಕೇಳುಗನಿಗೂ ಒಂದು ಸಂತಸ ದೊರೆಯಲಿದೆ. ಭಾಷಣದ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ಮಾತನಾಡದೆ ಹಿತಮಿತವಾಗಿ, ವಿನೂತನ ಶೈಲಿಯಲ್ಲಿ ಮಾತನಾಡಿದರೆ ಭಾಷಣಕ್ಕೆ ಮೌಲ್ಯ ದೊರೆಯಲಿದೆ ಎಂದರು.

ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಮಾತನಾಡಿ, ಜೇಸಿ ಸಂಸ್ಥೆ ಯುವಜನರನ್ನು ಉತ್ತೇಜಿಸುವ ಕಾರ್ಯ ಮಾಡುತ್ತಿದ್ದು ಪ್ರಮುಖವಾಗಿ ವ್ಯಕ್ತಿತ್ವ ವಿಕಸನ ತರಬೇತಿ ನೀಡಿ ಯುವಜನರನ್ನು ಮಾನಸಿಕವಾಗಿ ಸದೃಢವಾಗಿಸುತ್ತಿದೆ. ಜೇಸಿ ಸಂಸ್ಥೆಯಲ್ಲಿ ತರಬೇತಿ ಪಡೆದವರು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಜೇಸಿ ಸಂಸ್ಥೆಯ ಹಾಗೂ ಇತರ ಸಂಘ ಸಂಸ್ಥೆಯ ಸದಸ್ಯರಿಗೆ ಭಾಷಣ ಕಲೆಯ ಬಗ್ಗೆ ಪರಿಣಾಮಕಾರಿ ತರಬೇತಿ ನೀಡಿ ಉತ್ತಮ ಭಾಷಣಕಾರರನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ತರಬೇತುದಾರರಿಂದ ತರಬೇತಿ ನೀಡಲಾಗುತ್ತಿದೆ ಎಂದರು.

ಶಿಬಿರದಲ್ಲಿ 30 ಜನ ತರಬೇತಿ ಪಡೆದರು. ರಾಷ್ಟ್ರೀಯ ತರಬೇತುದಾರ ವಿಕಾಸ್ ಗೂಗ್ಲಿಯಾ, ದೇವದಾನ ಗ್ರಾಪಂ ಸದಸ್ಯ ಮದನ್ ಹುಣಸೇಹಳ್ಳಿ, ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುಧಾಕರ್, ಮಂಜುನಾಥ್ ತುಪ್ಪೂರು, ಸುರೇಂದ್ರ ಮಾಸ್ತರ್, ಚೈತನ್ಯ ವೆಂಕಿ ಇತರರಿದ್ದರು.