ಮೊಬೈಲ್ ಫೋನ್ ಬಂದು ಸಮಾಜದಲ್ಲಿ ಭಾವನೆಗಳನ್ನು ನಾಶ ಮಾಡಿಬಿಟ್ಟಿದೆ. ಯಾರಲ್ಲೂ ಭಾವನೆಗೂ, ಕಲ್ಪನಾಶಕ್ತಿಗಳು ಮೂಡದಂತಾಗಿದೆ ಎಂದು ಚಲನಚಿತ್ರ ನಟ, ನಿರ್ದೇಶಕ ಮತ್ತು ಪರಿಸರವಾದಿ ಸುರೇಶ್ ಹೆಬ್ಳಿಕರ್ ವಿಷಾದಿಸಿದರು.
ನಗರದ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಿಶ್ವಕಲಾ ದಿನದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ರೇಖಾಚಿತ್ರ ಕಲಾ ಪ್ರದರ್ಶನ ಹಾಗೂ ಸಿನಿಮೊಟೋಗ್ರಫಿ ಮತ್ತು ಫೋಟೋಗ್ರಫಿ ತರಬೇತಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಸೇರಿದಂತೆ ಎಲ್ಲರೂ ಮೊಬೈಲ್ ಹಿಡಿದು ಕೂತು ಸಮಯ ಕಳೆಯುತಿದ್ದೇವೆ ಎಂದರು.
ಇವತ್ತಿನ ಕಾಲಮಾನದಲ್ಲಿ ಛಾಯಾಚಿತ್ರಗ್ರಹಣ, ಸಿನಿಮಾಟೋಗ್ರಫಿ, ಚಿತ್ರಕಲೆ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿವೆ. ಫೋಟೋಗ್ರಫಿ ಅದ್ಭುತ ಪ್ರಪಂಚ ನಿರ್ಮಾಣ ಮಾಡಿದ್ದು, ಫೋಟೋಗ್ರಫಿಯ ಮುಂಚಿನ ಕಾಲದಕ್ಕೂ, ಈಗಿನ ಕಾಲಕ್ಕೂ ಹೆಚ್ಚಿನ ವ್ಯತ್ಯಾಸ ಕಾಣಬಹುದಾಗಿದೆ. ಮಕ್ಕಳಿಗೆ ಕಲ್ಪನಾ ಜಗತ್ತನ್ನು ಸೃಷ್ಟಿಸಬೇಕು. ನಮ್ಮ ಕಾಲದಲ್ಲಿ ರೇಡಿಯೋ ಕೇಳುವಾಗ ತಮ್ಮದೇ ಆದ ಕಲ್ಪನೆ, ಭಾವನೆ, ಜಗತ್ತಿನ ಬಗ್ಗೆ ಯೋಚನೆಗಳು ಸೃಷ್ಟಿಯಾಗುತ್ತಿದ್ದವು ಎಂದು ತಿಳಿಸಿದರು.
ರಂಗಾಯಣ ಮಾಜಿ ನಿರ್ದೇಶಕ ಎಚ್.ಜನಾರ್ದನ್(ಜನ್ನಿ) ಮಾತನಾಡಿ, ಕಲೆ ವಿಶ್ವಕ್ಕೆ ಸೇರಿದ್ದು, ಅದು ವಿಶ್ವವ್ಯಾಪಿ. ಕಲೆ ಸಾಧಾರಣವಲ್ಲ. ನಮ್ಮ ಆಲೋಚನೆಗಳು, ಕಲ್ಪನೆಗಳು ವಿಸ್ತಾರಗೊಳ್ಳುತ್ತಾ ಹೋಗಬೇಕು ಮತ್ತು ಜಗತ್ತಿಗೆ ಹಂಚಿಯಾಗಬೇಕು. ಆ ನಿಟ್ಟಿನಲ್ಲಿ ಚಾರಿತ್ರಿಕವಾಗಿ, ಬದ್ಧತೆಯಿಂದ, ಸೃಜನಶೀಲತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಹಿರಿಯ ಛಾಯಾಚಿತ್ರ ಕಲಾವಿದ ಎಂ.ಆರ್.ಮಂಜುನಾಥ್, ರವಿವರ್ಮ ಚಿತ್ರಕಲಾ ಶಾಲೆ ಮುಖ್ಯಶಿಕ್ಷಕ ಶಿವಕುಮಾರ್ ಕೆಸರಮಡು ಇದ್ದರು.