ಕುವೆಂಪು ವಿವಿಯಿಂದ ಎಂಎ ಕನ್ನಡ ಪದವಿಯಲ್ಲಿ 10 ಚಿನ್ನದ ಪದಕ ಪಡೆದ ವಸಂತಕುಮಾರ್ ಬೈರನಮಕ್ಕಿ ಅವರನ್ನು ಕಡಬಗೆರೆಯಲ್ಲಿ ನಡೆದ ಭೀಮಾ ಕೋರೆಗಾಂವ್ ಉತ್ಸವದಲ್ಲಿ ಸನ್ಮಾನಿಸಲಾಯಿತು. ಕೇಶವಮೂರ್ತಿ ಬಿ.ಕೆಸ್ತೂರ್, ಎಸ್.ಪೇಟೆ ಸತೀಶ್, ಬಿ.ಕೆ.ರಮೇಶ್, ಸುಂದರೇಶ್ ಇತರರಿದ್ದರು 
ನ್ಯೂಸ್

ಭಾರತೀಯರೆಲ್ಲರಿಗೂ ಇರುವ ಏಕೈಕ ಗ್ರಂಥ ಸಂವಿಧಾನ

ಬಾಳೆಹೊನ್ನೂರು: ನಮ್ಮ ದೇಶದಲ್ಲಿ ಹಲವು ಧರ್ಮಗಳಿದ್ದು ಎಲ್ಲ ಧರ್ಮಗಳಿಗೂ ಪ್ರತ್ಯೇಕ ಧರ್ಮ ಗ್ರಂಥಗಳಿವೆ. ಆದರೆ ಭಾರತೀಯರೆಲ್ಲರಿಗೂ ಇರುವ ಏಕೈಕ ಗ್ರಂಥ ಸಂವಿಧಾನವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.

ಸಮೀಪದ ಖಾಂಡ್ಯ ಹೋಬಳಿ ದಲಿತ ಸಂಘರ್ಷ ಸಮಿತಿ ಭಾನುವಾರ ಕಡಬಗೆರೆಯಲ್ಲಿ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.

ನಾವು ಯಾವುದೇ ಜಾತಿ, ಧರ್ಮಗಳಿಗೆ ಸೇರಿದವರಾಗಿದ್ದರೂ ಈ ದೇಶದ ಕಾನೂನು ಎಲ್ಲರಿಗೂ ಒಂದೇ ಆಗಿದೆ. ಶಾಂತಿ ಮತ್ತು ಸೌಹಾರ್ದ ದೇಶ ನಮ್ಮದು. ಇಲ್ಲಿ ಎಲ್ಲರೂ ಜಾತಿ, ಮತ, ಧರ್ಮದ ಭೇದವನ್ನು ಮರೆತು ಸೌಹಾರ್ದ ಮತ್ತು ಸಾಮರಸ್ಯದಿಂದ ಬದುಕಿದಾಗ ಮಾತ್ರ ಈ ದೇಶಕ್ಕೆ ಗೌರವ ದೊರೆಯಲು ಸಾಧ್ಯ ಎಂದರು.

ಪ್ರತಿಯೊಬ್ಬರೂ ಸಂವಿಧಾನವನ್ನು ಅರ್ಥ ಮಾಡಿಕೊಂಡು ಅದರಡಿಯಲ್ಲಿ ಬದುಕುವುದನ್ನು ಕಲಿಯಬೇಕೇ ಹೊರತು ಜಾತಿ, ಧರ್ಮಗಳ ಕಟ್ಟುಪಾಡಿನಲ್ಲಿ ಅಲ್ಲ. ಜಾತಿ, ಧರ್ಮದ ವ್ಯವಸ್ಥೆಗೆ ಕಟ್ಟುಬಿದ್ದಿರುವ ಕೆಲವು ದುಷ್ಟ ಶಕ್ತಿಗಳು ಸಂವಿಧಾನವನ್ನು ತಿರುಚುವ ಮಾತನಾಡುತ್ತಾರೆ. ಅಂಥವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕುವೆಂಪು ವಿಶ್ವವಿದ್ಯಾಲಯದಿಂದ ಎಂಎ ಕನ್ನಡ ಪದವಿಯಲ್ಲಿ 10 ಚಿನ್ನದ ಪದಕವನ್ನು ಪಡೆದ ವಸಂತಕುಮಾರ್ ಬೈರನಮಕ್ಕಿ ಅವರನ್ನು ಸನ್ಮಾನಿಸಲಾಯಿತು. ಮೈಸೂರಿನ ಅಂಬೇಡ್ಕರ್‌ವಾದಿ ಕೇಶವಮೂರ್ತಿ ಬಿ.ಕೆಸ್ತೂರ್, ಜಿಪಂ ಮಾಜಿ ಸದಸ್ಯೆ ಎಸ್.ಪೇಟೆ ಸತೀಶ್, ಡಿಎಸ್‌ಎಸ್ ಹೋಬಳಿ ಅಧ್ಯಕ್ಷ ಬಿ.ಕೆ.ರಮೇಶ್, ಗೌರವಾಧ್ಯಕ್ಷ ಸುಂದರೇಶ್, ಬಿ.ಎಸ್.ಮಾರ್ಕಂಡಯ್ಯ, ಹರೀಶ್, ಪೂರ್ಣೇಶ್, ಮಂಜುನಾಥ್, ಬಿ.ಎಂ.ಶ್ರೀನಿವಾಸ್, ರಾಜಕುಮಾರ್, ದಿನೇಶ್, ರಾಘವೇಂದ್ರ ಮತ್ತಿತರರಿದ್ದರು.