ಶೃಂಗೇರಿಯಲ್ಲಿ ಮೆಸ್ಕಾಂ ಇಲಾಖೆ ಜನಸಂಪರ್ಕ ಸಭೆ ನಡೆಯಿತು.ಅಧಿಕಾರಿಗಳಾದ ಹೇಮಂತ್, ಕೃಷ್ಣಾನಂದ, ಪ್ರಶಾಂತ್,ರಂಗನಾಥ್ ಇದ್ದರು. 
ನ್ಯೂಸ್

ಭಾರತೀಬೀದಿಗೆ 11ಕೆ.ವಿ.ವಿದ್ಯುತ್‌ಲೈನ್ ಅಳವಡಿಸಿ

ಶೃಂಗೇರಿ: ಕ್ಷೇತ್ರದಲ್ಲಿ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೃಹತ್ ಕಟ್ಟಡಗಳು ಹಾಗೂ ವಸತಿಗೃಹಗಳು ಸಹ ನಿರ್ಮಾಣವಾಗುತ್ತಿವೆ. ಹೀಗಾಗಿ ಭಾರತೀಬೀದಿಗೆ 11ಕೆ.ವಿ.ವಿದ್ಯುತ್‌ಲೈನ್‌ನ ಅಗತ್ಯವಿದೆ ಎಂದು ಉದ್ಯಮಿ ಸಂದೇಶ್ ಹೆಗಡೆ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.

ಮೆಸ್ಕಾಂ ಇಲಾಖೆ ಮಂಗಳವಾರ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಪಟ್ಟಣದ ಮುಖ್ಯರಸ್ತೆಯಲ್ಲಿ ಅಳವಡಿಸಿದ ವಿದ್ಯುತ್‌ಲೈನ್ ಅವೈಜ್ಞಾನಿಕವಾಗಿದೆ. ಹಾಗಾಗಿ ಇಲಾಖೆ ಈ ಕುರಿತು ಹೆಚ್ಚಿನ ಕಾಳಜಿ ವಹಿಸಿ ಹೊಸ ವಿದ್ಯುತ್ ಲೈನ್ ಹಾಕಬೇಕಿದೆ ಎಂದರು.

ಇಲಾಖೆಯ ಅಧೀಕ್ಷಕ ಅಭಿಯಂತರ ಮಂಜುನಾಥ್ ಮಾತನಾಡಿ, ಮುಖ್ಯರಸ್ತೆಯಲ್ಲಿ 11 ಕೆ.ವಿ. ವಿದ್ಯುತ್‌ಲೈನ್ ಎಳೆಯಲು ಪ್ರಮುಖವಾಗಿ ರಸ್ತೆ ವಿಸ್ತರಣೆಯಾಗಬೇಕಿದೆ. ಈ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಬೇಕಿದೆ. ಅವಶ್ಯಕತೆ ಇರುವ ಉದ್ಯಮಿಗಳು ಯು.ಜಿ.ಡಿ ಕೇಬಲ್ ಹಾಕಿಸಿಕೊಳ್ಳಬಹುದು. ಆದರೆ ಪಟ್ಟಣ ಪಂಚಾಯಿತಿ ಒಪ್ಪಿಗೆ ಪಡೆಯಬೇಕು ಎಂದರು.

ಕೃಷಿಕ ಕೃತಿಕ್ ಮಾತನಾಡಿ, ಬೇಗಾರಿನಿಂದ ಬೋಳೂರು ತನಕ ನಿರಂತರ ವೋಲ್ಟೇಜ್ ಸಮಸ್ಯೆ ಇದೆ. ಮೋಟಾರ್, ಮಿಕ್ಸಿಗಳು ಕಾರ್ಯನಿರ್ವಹಿಸಲು ಅಸಾಧ್ಯವಾಗಿದೆ. ಈ ಸಮಸ್ಯೆಯಿಂದ ಪಾರಾಗಲು ಸೋಲಾರ್‌ನ್ನು ಹತ್ತಾರು ರೈತ ಕುಟುಂಬದವರು ಹಾಕಿಸಿಕೊಂಡಿದ್ದಾರೆ. 1,40,000 ರೂ. ಕಟ್ಟಿದ್ದು ಮೋಟಾರ್‌ನ್ನು ಖರೀದಿಸಿದ್ದೇವೆ. ಅದರಿಂದ ನಮಗೆ ಏಳು ತಿಂಗಳು ಮಾತ್ರ ಪ್ರಯೋಜನವಾಗಿದೆ. ಕಳೆದ ಮೂರು ವರ್ಷಗಳಿಂದ ಮೋಟಾರ್ ಸ್ಥಗಿತಗೊಂಡಿದೆ.

ಟೆಂಡರ್ ವಹಿಸಿಕೊಂಡ ಕಂಪನಿಗೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದೇವೆ. ಆದರೆ ಇದುವರೆಗೆ ಸರ್ಕಾರ ನಮಗೆ ಸಬ್ಸಿಡಿ ಹಣವನ್ನು ಸಂದಾಯ ಮಾಡಿಲ್ಲ. ಹಾಗಾಗಿ ಕಂಪನಿ ಅವರು ಮೋಟಾರ್ ರಿಪೇರಿ ಮಾಡಲು ಬರುತ್ತಿಲ್ಲ. ಇಲಾಖೆ ಈ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು. ರೈತರಿಗೆ ತೋಟಗಳಿಗೆ ನೀರು ಹಾಯಿಸಲು ಮೋಟಾರು ತೀರಾ ಅವಶ್ಯಕವಾಗಿದೆ. ವೋಲ್ಟೆಜ್ ಸಮಸ್ಯೆಯಿಂದ ಮೋಟಾರ್ ಆಗಾಗ್ಗೆ ಕೆಟ್ಟು ಹೋಗಿ ರಿಪೇರಿಗೆ ಹಣ ನೀಡಿ ಸಾಕಾಗಿದೆ. ಅದನ್ನು ನಮಗೆ ನೀಡುವರು ಯಾರು? ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾನುವಳ್ಳಿ ಚಂದ್ರಶೇಖರ್ ಮಾತನಾಡಿ, ಅತಿಯಾದ ಮಳೆಯಿಂದ ಪ್ರಸ್ತುತ ರೈತರು ಬೆಳೆ ಕಳೆದುಕೊಂಡಿದ್ದಾರೆ. ಅರ್ಥಿಕವಾಗಿ ಕುಸಿದ ರೈತ ಕುಟುಂಬದ ಸಂಕಷ್ಟವನ್ನು ಇಲಾಖೆ ಅರ್ಥಮಾಡಿಕೊಂಡು ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ತಾಲೂಕಿನ ಹಗಡೂರಿನಲ್ಲಿ ವೋಲ್ಟೇಜ್ ಸಮಸ್ಯೆಯನ್ನು ಸುಮಾರು 25 ಮನೆಗಳು ಎದುರಿಸುತ್ತಿದ್ದು ವಿದ್ಯುತ್ ಸ್ಥಾವರ ಹಾಕುವ ಅಗತ್ಯವಿದೆ ಎಂದು ಗ್ರಾಮಸ್ಥರಾದ ನಾಗರಾಜ್,ಸಂದೇಶ್ ಅಧಿಕಾರಿಗಳಿಗೆ ಮನವಿ ಮಾಡಿದರು. ಕೊಪ್ಪ ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಅಭಿಯಂತರ ಸಿದ್ದೇಶ್ ಮಾತನಾಡಿ, ಸಮಸ್ಯೆ ಬಗೆಹರಿಸಲು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

ನಮ್ಮ ಮನೆಯ ಮೇಲೆ ವಿದ್ಯುತ್‌ಲೈನ್ ಇದ್ದು ಮನೆಯ ಎರಡನೇ ಅಂತಸ್ತು ಕಟ್ಟಲು ತೊಡಕು ಉಂಟಾಗಿದೆ ಎಂದು ಕುರುಬಕೇರಿ ಕೃಷ್ಣಪ್ಪ ಸಭೆಗೆ ತಿಳಿಸಿದಾಗ ಎಇಇ ದೀಪಕ್ ಅದನ್ನು ಕೂಡಲೇ ಸರಿಪಡಿಸುತ್ತೇವೆ ಎಂದರು.