ನ್ಯೂಸ್

ಭಾರತದ ಸೈನ್ಯಕ್ಕೆ ಸದಾ ಬೆಂಬಲ

ದೇಶದ ಭದ್ರತೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತ ಸೈನ್ಯಕ್ಕೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಶ್ರೀ ಹೊಸಮಠದ ಅಧ್ಯಕ್ಷ ಶ್ರೀ ಚಿದಾನಂದ ಸ್ವಾಮೀಜಿ ಹೇಳಿದರು.

ನಗರದ ಶ್ರೀ ನಟರಾಜ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಭಾರತೀಯ ಸೈನ್ಯ ಅತ್ಯಂತ ದಕ್ಷತೆಯಿಂದ ಕೂಡಿದ್ದು, ಸಂಕಷ್ಟದ ಸಂದರ್ಭದಲ್ಲಿಯೂ ಎದೆಗುಂದದೆ ದೇಶದ ರಕ್ಷಣೆಗಾಗಿ ಹೋರಾಡುವ ಮೂಲಕ ಹುತಾತ್ಮರಾಗುತ್ತಿದ್ದಾರೆ. ಇವರ ದೇಶ ಪ್ರೇಮದ ನಡೆಗೆ ಹಾಗೂ ಹೋರಾಟಕ್ಕೆ ನಮ್ಮೆಲ್ಲರ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ಭಾರತದ ಅಮಾಯಕ ಪ್ರವಾಸಿಗರನ್ನು ಉಗ್ರರು ಹತ್ಯೆಗೈದಿರುವುದನ್ನು ನಾವು ಖಂಡಿಸುತ್ತೇವೆ. ಭಾರತ ಸರ್ವರನ್ನು ಪ್ರೀತಿ ಹಾಗೂ ಸೌಹಾರ್ದತೆಯಿಂದ ನಡೆಸಿಕೊಳ್ಳುವುದರ ಜತೆಗೆ ಶಾಂತಿ ಬಯಸುತ್ತ ಬರುತ್ತಿದೆ. ಹೀಗಾಗಿ ಪಾಕಿಸ್ತಾನದ ಉಗ್ರ ಚಟುವಟಿಕೆಗಳ ಸಂಹಾರಕ್ಕೆ ಭಾರತ ಸರ್ಕಾರ ತೆಗೆದುಕೊಳ್ಳುವ ಎಲ್ಲ ನಿರ್ಧಾರಗಳನ್ನು ಸ್ವಾಗತಿಸಿ ಬೆಂಬಲಿಸುತ್ತೇವೆ ಎಂದರು.

ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು 12ನೇ ಶತಮಾನದಲ್ಲಿ ಕ್ರಾಂತಿಕಾರಿ ಬಸವೇಶ್ವರರು ಅನುಭವ ಮಂಟಪದ ಮುಖಾಂತರ ಪರಿಚಯಿಸಿದ್ದಾರೆ. ಅನುಭವ ಮಂಟಪವೇ ಈಗಿನ ಸಂಸತ್. ಪ್ರಧಾನಿ ನರೇಂದ್ರ ಮೋದಿ ಅವರು ಬಸವಣ್ಣನವರ ವಿಚಾರಧಾರೆಗಳನ್ನು ಅರಿತಿದ್ದರಿಂದ ಸಂಸತ್ ಭವನದ ಆವರಣದಲ್ಲಿ ಬಸವೇಶ್ವರ ಜಯಂತಿ ಆಚರಿಸಿವುದರ ಜತೆಗೆ ಬಸವಾದಿ ಶರಣರ ಸಮ ಸಮಾಜದ ಚಿಂತನೆಗೆ ಮನ್ನಣೆ ನೀಡಿದ್ದಾರೆ ಎಂದು ಹೇಳಿದರು.

ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ. ಶಿವರಾಜಪ್ಪ ಮಾತನಾಡಿ, ಪಾಕಿಸ್ತಾನದಿಂದ ಬಂದ ಭಯೋತ್ಪಾದಕರು ಕುತಂತ್ರದಿಂದ 26 ಪ್ರವಾಸಿಗರನ್ನು ಹತ್ಯೆ ಮಾಡಿದ್ದಾರೆ. ಭಾರತ ಶಾಂತಿ ಬಯಸುತ್ತದೆ ಅದನ್ನು ಸಹಿಸದ ಪಾಕಿಸ್ತಾನ ಕೆಡಕನ್ನು ಬಯಸುತ್ತಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಲ್ಲಿ ಮೋದಿ ಹಾಗೂ ಸೈನಿಕರಿಗೆ ಧೈರ್ಯ ತುಂಬುವ ಕೆಲಸವಾಗಬೇಕು ಎಂದರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಕೆ.ಹೆಮ್ಮನಹಳ್ಳಿ ಶ್ರೀ ಗೌರಿಶಂಕರ ಸ್ವಾಮೀಜಿ, ಬಸವೇಶ್ವರ ಮಠದ ಶ್ರೀ ಶಿವಪ್ರಭು ಸ್ವಾಮೀಜಿ, ಮುಖಂಡ ಮೂಗೂರು ನಂಜುಂಡಸ್ವಾಮಿ ಇದ್ದರು.