ಸಾಮಾಜಿಕ ವ್ಯವಸ್ಥೆ ಮತ್ತು ನೈಸರ್ಗಿಕ ಪರಿಸರ ಕಲುಷಿತವಾಗುತ್ತಿದೆ. ಭವಿಷ್ಯದ ಪೀಳಿಗೆಗಾಗಿ ಪರಿಸರ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಮೈಸೂರು ನಗರ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಕೆ.ಎಸ್. ಸುಂದರ್ ರಾಜ್ ಹೇಳಿದರು.
ಹೂಟಗಳ್ಳಿ ಎಸ್‌ಆರ್‌ಎಸ್ ಕಾಲೋನಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್‌ಮೆಂಟ್ ವತಿಯಿಂದ ಆಯೋಜಿಸಿದ್ದ ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಹುಟ್ಟುಹಬ್ಬ ಪ್ರಯುಕ್ತ ಸಸಿ ನೆಡುವ ಹಾಗೂ ಪರಿಸರ ಕುರಿತ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.
ಬದುಕಿನಲ್ಲಿ ನಾನಾ ಕಷ್ಟಗಳನ್ನು ಎದುರಿಸಿರುವ ಹೆಣ್ಣು ಮಕ್ಕಳಿಗೆ ಒಡನಾಡಿ ಸೇವಾ ಸಂಸ್ಥೆ ಊರುಗೋಲಾಗಿ ಪಿತೃಸ್ಥಾನದಲ್ಲಿದ್ದು ಆಶ್ರಯ ನೀಡಿದೆ. ಹೆಣ್ಣುಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು ಬದುಕು ಕಟ್ಟಿಕೊಳ್ಳಬೇಕು. ಜ್ಞಾನ ಸಂಪಾದನೆ ಮಾತ್ರ ನಿಮ್ಮೆಲ್ಲರ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಿದರು.
ಬೋಧಿವೃಕ್ಷ ಸೊಸೈಟಿ ಫಾರ್ ಡೆವಲಪ್‌ಮೆಂಟ್ ಅಧ್ಯಕ್ಷ ಎಂ.ಎಸ್. ಚಂದ್ರ ಮಾತನಾಡಿದರು. ದಲಿತ ಮುಖಂಡ ಹರಿಹರ ಅನಂತಸ್ವಾಮಿ, ಒಡನಾಡಿ ಸ್ಟ್ಯಾನ್ಲಿ, ಲೇಖಕ ರಾಘವೇಂದ್ರ ಅಪುರಾ, ಪ್ರಭು, ಪತ್ರಕರ್ತ ಸೋಮಯ್ಯ ಮಲೆಯೂರು, ಮುನಿರಾಜು, ಸ್ವಾಮಿ, ಪ್ರಜ್ವಲ್, ದರ್ಶನ್, ಚೇತನ್, ವಿಶ್ವನಾಥ್, ಮಂಜುನಾಥ್ ಇತರರಿದ್ದರು.