ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಗುತ್ತಿಗೆದಾರರ ಸಂಘದ ಸದಸ್ಯರು ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ದಸರಾ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಇದಕ್ಕೆ ಚಾಲನೆ ನೀಡಲು ಆಗಮಿಸಿದ್ದ ಸಚಿವರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿ ಪ್ರತಿಭಟನಾಕಾರರ ಮನವಿ ಆಲಿಸಿದರು.
ಚಾಮರಾಜನಗರ ನಗರಸಭೆಯಲ್ಲಿ 17 ಕೋಟಿ ರೂ. ಒಂದೇ ಪ್ಯಾಕೇಜ್ ಮಾಡಿ ಟೆಂಡರ್ ಕರೆದಿರುವುದರಿಂದ ಸಣ್ಣ ಗುತ್ತಿಗೆದಾರರು ಟೆಂಡರ್ ನಲ್ಲಿ ಭಾಗವಹಿಸಲು ಅರ್ಹತೆ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಸಚಿವರಿಗೆ ತಿಳಿಸಿದರು. ಇನ್ನೂ ಹಲವು ಬೇಡಿಕೆಗಳನ್ನು ಪ್ರಸ್ತಾಪಿಸಿದರು.
ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಟೆಂಡರ್ ಪ್ಯಾಕೇಜ್ ರದ್ದು ಮಾಡುತ್ತೇನೆ ಎಂದು ಭರವಸೆ ನೀಡಿದರು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಕೆಲವು ಸೂಚನೆಗಳನ್ನು ನೀಡಿದರು.
ಜಿಲ್ಲಾಧ್ಯಕ್ಷ ಎಂ.ಎಸ್.ಮಾದಯ್ಯ, ಪ್ರಧಾನ ಕಾರ್ಯದರ್ಶಿ ಚನ್ನಯ್ಯ, ಟೆಂಡರ್ ಕಮಿಟಿ ಅಧ್ಯಕ್ಷ ನಲ್ಲೂರು ಮಹದೇವಸ್ವಾಮಿ, ಗೌರವಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಂಗಾರು, ಗುತ್ತಿಗೆದಾರರಾದ ಚಂದ್ರು, ಮಹದೇವಪ್ಪ, ನಾಗರಾಜು, ರವಿ, ಗಣೇಶ್ ಪ್ರಸಾದ್, ರಮೇಶ್, ಕೃಷ್ಣ ಮತ್ತು ಇತರರು ಇದ್ದರು.