ಬಾಳೆಹೊನ್ನೂರು: ಹೋಬಳಿಯ ವಿವಿಧೆಡೆ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಶನಿವಾರ ಸಂಜೆಯಿಂದ ಬಿರುಸುಗೊಂಡಿತು. ಭಾನುವಾರ ಇಡೀ ದಿನ ಧಾರಾಕಾರ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಯಿತು.
ಇಡೀ ದಿನ ನಿರಂತರ ಮಳೆ ಸುರಿದಿದ್ದು ಥಂಡಿಯ ವಾತಾವರಣ ನಿರ್ಮಾಣವಾಯಿತು. ಆಗಾಗ ಜೋರಾಗಿ ಗಾಳಿಯೂ ಬೀಸುತ್ತಿದ್ದರಿಂದ ಮಳೆ ಮತ್ತಷ್ಟು ಬಿರುಸುಗೊಂಡಿತು. ಜೂನ್ ಅಂತ್ಯ, ಜುಲೈ, ಆಗಸ್ಟ್‌ನಲ್ಲಿ ಹೆಚ್ಚಾಗುತ್ತಿದ್ದ ಭದ್ರಾನದಿಯ ನೀರಿನ ಹರಿವಿನ ಪ್ರಮಾಣ ಮೇನಲ್ಲಿಯೇ ಹೆಚ್ಚಾಗಿದೆ. ಇದರೊಂದಿಗೆ ಸಣ್ಣಪುಟ್ಟ ಹಳ್ಳಕೊಳ್ಳಗಳಲ್ಲಿಯೂ ನೀರಿನ ಹರಿವು ಏರಿಕೆಯಾಗಿದೆ.
ಪಟ್ಟಣದ ಭದ್ರಾ ನದಿಯ ಸೇತುವೆ ಮೇಲ್ಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿಯದೆ ಸೇತುವೆಯ ಮೇಲೆ ನಿಂತಿದೆ. ಇದರಿಂದಾಗಿ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.
ಗಾಳಿ, ಮಳೆಯಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದ್ದು ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಮಳೆಯ ವೇಳೆ ಯಾವುದೇ ಅವಘಡ, ಅನಾಹುತಗಳು ಸಂಭವಿಸದಂತೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.