ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಭಜನಾ ಮೇಳದಲ್ಲಿ ದಾವಣಗೆರೆ ಕೋಲ್ಕುಂಟೆ ಗ್ರಾಮದ ಬಸವೇಶ್ವರ ಭಜನಾ ತಂಡ ಹಾಡುಗಾರಿಕೆಯಲ್ಲಿ ತೊಡಗಿರುವುದು. 
ನ್ಯೂಸ್

ಭಜನಾ ಮೇಳದಲ್ಲಿ 700 ತಂಡಗಳು ಭಾಗಿ


ನಂಜನಗೂಡು: ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಭಜನಾ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಈ ಬಾರಿ ದಾಖಲೆಯ 700 ತಂಡಗಳ ಎಂಟು ಸಾವಿರಕ್ಕೂ ಹೆಚ್ಚು ಜನಪದ ಕಲಾವಿದರು ಭಾಗವಹಿಸಿದ್ದಾರೆ. ಈ ಪೈಕಿ ಬಹುಪಾಲು ತಂಡಗಳು ಉತ್ತರ ಕರ್ನಾಟಕ ಭಾಗದವು ಎಂಬುದು ಗಮನಾರ್ಹ.
1992ರಲ್ಲಿ 12 ತಂಡಗಳ ಪ್ರದರ್ಶನದೊಂದಿಗೆ ಆರಂಭಗೊಂಡ ಭಜನಾಮೇಳಕ್ಕೆ ಜಿಲ್ಲಾ ಮಟ್ಟದ ತಂಡಗಳ ಭಾಗವಹಿಸುತ್ತಿದ್ದವು. ಕ್ರಮೇಣ ಉತ್ತರ ಕರ್ನಾಟಕದ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದವಾದರೂ ಈಗ ಹೊರ ರಾಜ್ಯಗಳ ತಂಡದವರೂ ಭಾಗಿಯಾಗುತ್ತಿದ್ದಾರೆ.
ಈ ಬಾರಿ ಭಜನಾ ಮೇಳದಲ್ಲಿ ಪುರುಷರ ವಿಭಾಗದಲ್ಲಿ 449, ಪುರುಷರ ಏಕತಾರಿ 41, ಗ್ರಾಮೀಣ ಮಹಿಳೆಯರ ವಿಭಾಗದಲ್ಲಿ 137, ನಗರ ಮಹಿಳೆಯರು 36, ಮಹಿಳೆಯರ ಏಕತಾರಿ ವಿಭಾಗ 23, ಮಕ್ಕಳ ಭಜನಾ ತಂಡ 23 ಹಾಗೂ ಹೊರ ರಾಜ್ಯದಿಂದ 10 ಭಜನಾ ತಂಡಗಳು ಆಗಮಿಸಿವೆ. ಜಾತ್ರೆಯ ಪ್ರಾರಂಭದ ದಿನದಿಂದಲೇ ಸ್ಪರ್ಧೆಗಳು ಆರಂಭಗೊಂಡಿದ್ದು, ಬೆಳಗ್ಗೆ 9ರಿಂದ ಸಂಜೆ 7ರವರೆಗೆ ನಿರಂತರವಾಗಿ ವೇದಿಕೆಯಲ್ಲಿ ಭಜನೆ ನಡೆದಿದೆ.
ಭಜನಾ ಮೇಳದಲ್ಲಿ ಭಾಗವಹಿಸುವ ಸ್ಪರ್ಧೆಗಳಿಗೆ 6 ವಿಭಾಗಗಳಿಂದ ಒಟ್ಟು 30 ತಂಡಗಳಿಗೆ ಬಹುಮಾನ ನೀಡಲಾಗುತ್ತಿದ್ದು ಪುರುಷರ ಭಜನೆ, ಪುರುಷರ ಏಕತಾರಿ, ಮಕ್ಕಳ ವಿಭಾಗ, ಮಹಿಳೆಯರು ನಗರ ವಿಭಾಗ, ಮಹಿಳೆಯರು ಗ್ರಾಮಾಂತರ ವಿಭಾಗ ಹಾಗೂ ಮಹಿಳೆಯರ ಏಕತಾರಿ ವಿಭಾಗದಲ್ಲಿ ಸ್ಪರ್ಧೆಗಳು ಜರುಗುತ್ತಿದ್ದು ಪ್ರತಿ ವಿಭಾಗದಲ್ಲೂ 5 ತಂಡಗಳಿಗೆ ಬಹುಮಾನ ನೀಡಲಾಗುತ್ತಿದೆ. ಪ್ರದರ್ಶನ ನೀಡುವ ಪ್ರತಿ ತಂಡಕ್ಕೂ ಪ್ರಶಂಸಾ ಪತ್ರ ನೀಡಲಾಗುತ್ತಿದೆ.
ಉತ್ತರ ಹಾಗೂ ದಕ್ಷಿಣ ಕರ್ನಾಟಕ ಜನಜೀವನವನ್ನು ಬೆಸೆದು ಸಾಮರಸ್ಯ ಮೂಡಿಸುವ ವೇದಿಕೆಯಾಗಿ ಭಜನಾ ಮೇಳ ರೂಪುಗೊಂಡಿದೆ. ಮೇಳದಲ್ಲಿ ಭಾಗವಹಿಸಿರುವ ಬಹುತೇಕ ಹಿರಿಯರು ಸ್ಪರ್ಧೆ ಬಳಿಕ ಪರಸ್ಪರ ವಿಚಾರ ವಿನಿಮಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಭಜನೆಯ ಜತೆಗೆ ದೇಸಿ ಆಟಗಳಲ್ಲೂ ಉತ್ತಕ ಕರ್ನಾಟಕ ಭಾಗದ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ.
ಆಧುನಿಕತೆಯಿಂದ ಭಜನೆಗೆ ಕುತ್ತು
ಆಧುನಿಕತೆ ಬೆಳೆದಂತೆ ಭಜನೆ ಕಲೆಗೆ ಕಂಟಕ ಎದುರಾಗುತ್ತಿದೆ. ರಿಯಾಲಿಟಿ ಶೋ, ಟಿವಿ ಪರದೆಯಲ್ಲಿ ಮಕ್ಕಳನ್ನು ಕಾಣಬೇಕೆಂಬ ಪಾಲಕರ ಆಸೆಗೆ ದೇಸಿ ಕಲೆಗಳಿಂದ ಮಕ್ಕಳು ವಿಮುಖರಾಗುತ್ತಿದ್ದಾರೆ. ಭಜನೆ ಕಲೆಯಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂಬ ಅರಿವು ಪೋಷಕರಿಗಿಲ್ಲವಾಗಿದೆ ಎನ್ನುವುದು ಮೇಳದಲ್ಲಿ ಭಾಗವಹಿಸಿರುವ ಬಹುತೇಕ ಕಲಾವಿದರ ಅಭಿಪ್ರಾಯವಾಗಿದೆ.
ಯುವ ಪೀಳಿಗೆಗೆ ಭಜನೆ ಕಲಿಸಿದರೆ ಚಟಕ್ಕೆ ತುತ್ತಾಗುತ್ತಾರೆಂಬ ಆತಂಕ ಪಾಲಕರಲ್ಲಿ ಆವರಿಸಿದೆ. ಭಜನೆ ಬದಲಾಗಿ ಶಾಸ್ತ್ರೀಯ ಹಾಗೂ ಸುಗಮ ಸಂಗೀತದತ್ತ ಮುಖ ಮಾಡುತ್ತಿದ್ದಾರೆ. ಆದರೆ ನಾವ್ಯಾರು ಚಟಕ್ಕೆ ಬಲಿಯಾಗಲಿಲ್ಲ. ಕಲೆ ಕರಗತ ಮಾಡಿಕೊಂಡು ದೇವರ ನಾಮ, ತತ್ವಪದ, ದಾಸರ ಪದಗಳನ್ನು ಪಠಿಸುತ್ತ ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗಿದೆ ಎನ್ನುತ್ತಾರೆ ಗೋಕಾಕ್‌ನ ರುದ್ರಮುನಿ.